ಕದಂಬರು (ಸಾ.ಶ 345 – 525)

  ಕದಂಬರು (ಸಾ.ಶ 345 525)

ಕದಂಬರು ಕನ್ನಡದ ಮೊದಲ ರಾಜಮನೆತನದವರು. ಕದಂಬರ ರಾಜಧಾನಿ ಬನವಾಸಿ. ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವರದಾ ನದಿಯ ದಂಡೆಯ ಮೇಲಿದೆ. ಈ ನಗರವನ್ನು ಗ್ರೀಕ್‌ ಇತಿಹಾಸಕಾರ ಟಾಲೆಮಿಯು ಬೈಜಾಂಟಿಯನ್‌ ಎಂದು ಕರೆದಿದ್ದಾನೆ.

ಕದಂಬರ ರಾಜಲಾಂಛನ ಸಿಂಹ. ಸಂಸ್ಕೃತ ಮತ್ತು ಕನ್ನಡಗಳು ಇವರ ಕಾಲದ ಆಡಳಿತ ಭಾಷೆಗಳಾಗಿದ್ದವು.

ಕದಂಬರಲ್ಲಿ ಗೋವೆಯ ಕದಂಬರು ಹಾಗೂ ಹಾನಗಲ್ಲಿನ ಕದಂಬರು ಎಂಬ ಎರಡು ಶಾಖೆಗಳನ್ನು ಕಾಣುತ್ತೇವೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರದಲ್ಲಿ ದೊರಕಿದ ರವಿವರ್ಮನ ಶಾಸನದಲ್ಲಿ ಮಯೂರವರ್ಮನ ತಂದೆ ಬಂಧುಷೇಣ ಮತ್ತು ತಾತ ವೀರಶರ್ಮ ಎಂಬ ಮಾಹಿತಿ ದೊರತಿದೆ.

ಚಿತ್ರದುರ್ಗದ ಚಂದ್ರವಳ್ಳಿಯ‌ ಪ್ರಾಕೃತ ಶಾಸನವೊಂದರಲ್ಲಿ ಮಯೂರವರ್ಮನು ಪ್ರಜೆಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿದ ಮಾಹಿತಿಯಿದೆ.

ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಅಶ್ವಮೇಧಯಾಗಗಳನ್ನು ಕೈಗೊಂಡ ಅರಸ ಮಯೂರವರ್ಮ. ಈತನಿಗೆ ಧರ್ಮ ರಾಜಾಧಿರಾಜ ಎಂಬ ಬಿರುದಿತ್ತು.

ಕದಂಬ ಅರಸ ಕಂಗವರ್ಮನು ರಾಜ್ಯ ಕಳೆದುಕೊಂಡು ಅಲೆಮಾರಿಯಾಗಿ ಅಲೆಯುತ್ತಿದ್ದಾಗ ಭಗೀರಥವರ್ಮನು ರಹಸ್ಯವಾಗಿ ಜನಿಸಿದನು. ಈ ಕಾರಣದಿಂದಾಗಿ ಭಗೀರಥವರ್ಮನಿಗೆ ಕದಂಬ ಕುಲಪ್ರಚ್ಛನ್ನ ಎಂಬ ಬಿರುದಿತ್ತು. ಭಗೀರಥವರ್ಮನು ವಾಕಟಕರ ವಿಂದ್ಯಸೇನನೊಡನೆ ಹೋರಾಡಿ, ಕಂಗವರ್ಮನು ಸೋತಿದ್ದ ನಾಡನ್ನು ಮತ್ತೆ ಗೆದ್ದು ಕುಂತಳಭುವನವಲ್ಲಭ ಎಂಬ ಬಿರುದನ್ನು ಧರಿಸಿದನು.

ಪರಶಿವ ಎಂಬ ಬಿರುದನ್ನು ಹೊಂದಿದ್ದ ಕದಂಬರ ರಘುಪತಿವರ್ಮನು ಗುಪ್ತರ ೨ನೇ ಚಂದ್ರಗುಪ್ತನ ಸಮಕಾಲೀನನಾಗಿದ್ದನು

ಸಾ.ಶ.ಪೂ 450 ರಲ್ಲಿ ರಾಜ ಕಾಕುತ್ಸವರ್ಮನ ಕಾಲದಲ್ಲಿ ಕೆತ್ತಲಾದ ಬೇಲೂರು ತಾಲ್ಲೂಕಿನ ಹಲ್ಮಿಡಿ ಶಾಸನವು ಕರ್ನಾಟಕದ ಪ್ರಥಮ ಕನ್ನಡ ಶಾಸನವಾಗಿದೆ. ಈ ಶಾಸನದ ಭಾಷೆ ಪೂರ್ವದ ಹಳಗನ್ನಡ ಎಂದು ಬಿ.ಎಲ್ ರೈಸ್, ಆರ್ ನರಸಿಂಹಾಚಾರ್ಯ ಮತ್ತು ಡಿ.ಎಲ್ ನರಸಿಂಹಾಚಾರ್ಯರು ಸಂಶೋಧಿಸಿದ್ದಾರೆ. ವಿಜಅರಸ ಎಂಬ ಇತಿಹಾಸ ಪುರುಷನ ಕುರಿತು ಈ ಶಾಸನದಲ್ಲಿ ಹೇಳಲಾಗಿದೆ.

ಕಾಕುತ್ಸವರ್ಮನು ಸಂಸ್ಕೃತದ ಬದಲಾಗಿ ಕನ್ನಡವನ್ನು ರಾಜ್ಯಭಾಷೆಯನ್ನಾಗಿಸಿದನು. ತಾಳಗುಂದ ಶಾಸನವು ಈತನ ದಿಗ್ವಿಜಯಗಳನ್ನು ತಿಳಿಸುತ್ತದೆ

ತಾಳಗುಂದದಲ್ಲಿ ರಾಜಾ ಶಾಂತಿವರ್ಮನ ಕಾಲದ (ಕ್ರಿ.ಶ. 460) ಪ್ರಣವೇಶ್ವರ ದೇವಾಲಯದ ಮುಂದಿರುವ ಸಂಸ್ಕೃತ ಶಾಸನವು ಕದಂಬರ ಸಾಮ್ರಾಜ್ಯದ ಉದಯದ ಬಗ್ಗೆ ವಿವರಗಳನ್ನು ನೀಡುತ್ತದೆ. ಇದು ಕರ್ನಾಟಕದ ಮೊದಲ ಸಂಸ್ಕೃತ ಶಾಸನವಾಗಿದೆ. ಈ ಶಾಸನದ ರಚನಕಾರ ಕವಿಕುಬ್ಜ

ವಿಷ್ಣುವರ್ಮನ ಬೀರೂರಿನ ಫಲಕದಲ್ಲಿ ಶಾಂತಿವರ್ಮನನ್ನು ಸಮಸ್ತ ಕರ್ನಾಟಕದ ಒಡೆಯ ಎಂದು ಸಂಬೋಧಿಸಲಾಗಿದೆ.

ಮೃಗೇಶವರ್ಮನು ಹಲಸೆಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು ಮತ್ತು ಪ್ರಣವೇಶ್ವರ ಕೆರೆಯನ್ನು ಕಟ್ಟಿಸಿದನು.

ಮಂಡ್ಯ ತಾಲೂಕಿನಲ್ಲಿನ ಮಳವಳ್ಳಿ ಶಾಸನದಿಂದ ಇವರ ಕಾಲದಲ್ಲಿ ಪ್ರಾಕೃತ ಭಾಷೆ ಸಹ ಬಳಕೆಯಲ್ಲಿತ್ತು ಎಂಬುದು ತಿಳಿದುಬರುತ್ತದೆ.

ಕಾಳಿದಾಸ ಇವರ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನೆಂದು ಕುಂತಳೇಶ್ವರ ದೌತ್ಯಂ ಎಂಬ ಕೃತಿಯಿಂದ ತಿಳಿದುಬರುತ್ತದೆ.

ಹಾನಗಲ್ ಮತ್ತು ಪುಲಿಗೆರೆಗಳು ಜೈನ ಕೇಂದ್ರಗಳಾಗಿದ್ದರೆ ಅಜಂತ ಮತ್ತು ಬನವಾಸಿಗಳು ಬೌದ್ಧ ಕೇಂದ್ರಗಳಾಗಿದ್ದವು.

ಸು.636 ರ ವೇಳೆಗೆ ಬನವಾಸಿಗೆ ಬಂದ ಚೀನಾ ದೇಶದ ಪ್ರವಾಸಿ ಯುವಾನ್ ಚಾಂಗ್ ಬನವಾಸಿಯಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳೆರಡೂ ಇದ್ದವೆಂದು ಹಾಗೂ ಒಂದು ನೂರು ಬೌದ್ಧ ಸಂಘಾರಾಮಗಳೂ, ಹತ್ತು ಸಾವಿರ ಭಿಕ್ಷುಗಳೂ ಇದ್ದರೆಂದು ಉಲ್ಲೇಖಿಸಿದ್ದಾನೆ.

ವಿರ ಮತ್ತು ಸ್ಕಂದ ಎಂಬ ಕನ್ನಡ ಲಿಪಿಯಿರುವ ನಾಣ್ಯಗಳು, ರಾಜಾ ಭಗೀರಥನ (ಕ್ರಿ.ಶ. 390-415) ಕಾಲದ ಶ್ರೀ ಮತ್ತು ಭಾಗಿ ಎಂಬ ಕನ್ನಡ ಶಬ್ದಗಳಿರುವ ಬಂಗಾರದ ನಾಣ್ಯಗಳು. ಬನವಾಸಿಯಲ್ಲಿ ಐದನೆಯ ಶತಮಾನದ ಶ್ರೀಮಾನರಾಗಿ ಎಂಬ ಕನ್ನಡ ಶಬ್ದವಿರುವ ತಾಮ್ರದ ನಾಣ್ಯಗಳು ದೊರೆತಿವೆ.

ಚೈತ್ರ ದೀಪಾವಳಿ ಕದಂಬರ ಕಾಲದ ಪ್ರಮುಖ ಉತ್ಸವವಾಗಿತ್ತು.

ಕದಂಬರ ಕಾಲದ ವಾಸ್ತುಶಿಲ್ಪ ಶೈಲಿಯನ್ನು ಕದಂಬ ನಾಗರ ಶೈಲಿ ಎನ್ನುವರು. ಪ್ರಮುಖ ದೇವಾಲಯಗಳು ಹಲಸಿಯ ಜೈನ ದೇವಾಲಯ, ಗುಡ್ನಾಪುರದ ಮನ್ಮಥ ದೇವಾಲಯ, ಜಂಬೇಹಳ್ಳಿಯ ದುರ್ಗಾ ದೇವಾಲಯ, ಬನವಾಸಿಯ ಮಧುಕೇಶವ ದೇವಾಲಯ, ಮುಂತಾದವು.

ವೈದಿಕ ಸಂಪ್ರದಾಯದ ಪ್ರಥಮ ಗುಹಾಲಯವೆನ್ನಬಹುದಾದ ತ್ರಿಕೂಟ ಗುಹಾಲಯ (ಶಿವ, ಸೂರ್ಯ, ಕಾರ್ತಿಕೇಯ) ಇವರ ಕಾಲದ ಪ್ರಮುಖ ರಚನೆಯಾಗಿದೆ.


ಕದಂಬರ ಕಾಲದ ಪ್ರಮುಖ ಹುದ್ದೆಗಳು

ಪ್ರಧಾನ (ಪ್ರಧಾನ ಮಂತ್ರಿ)

ವಿದ್ಯಾವೃದ್ಧ (ವಿದ್ವಾಂಸ ವೃದ್ಧರು)

ದೇಶಾಮಾತ್ಯ (ವೈದ್ಯ)

ರಹಸ್ಯಾಧ್ಯಕ್ಷ (ಖಾಸಗೀ ಕಾರ್ಯದರ್ಶಿ)

ಧರ್ಮಾಧ್ಯಕ್ಷ (ಮುಖ್ಯ ನ್ಯಾಯಾಧೀಶ)

ಸೇನೆಯಲ್ಲಿ ಜಗದಾಲ, ದಂಡನಾಯಕ ಮತ್ತು ಸೇನಾಪತಿ ಎಂಬ ಹುದ್ದೆಗಳಿದ್ದವು.

ರಾಜ್ಯವನ್ನು ಮಂಡಲಗಳಾಗಿ ವಿಭಾಗಿಸಲಾಗಿತ್ತು ಇದರ ಮುಖ್ಯಸ್ತರು ಮಾಂಡಲಿಕರು. ಅನೇಕ ವಿಷಯಗಳಿಂದ (ಜಿಲ್ಲೆ) ಒಂದು ಮಂಡಲವಾಗುತ್ತಿತ್ತು ಈ ವಿಷಯಗಳ ಮುಖ್ಯಸ್ಥರನ್ನು ಮನ್ನೆಯರು ಎನ್ನುತ್ತಿದ್ದರು. ಮಹಾಗ್ರಾಮ (ತಾಲೂಕು) ಮತ್ತು ದಶಗ್ರಾಮ (ಹೋಬಳಿ) ಇತರ ಆಡಳಿತ ಉಪ ವಿಭಾಗಗಳಾಗಿದ್ದವು.

ಪ್ರಮುಖ ತೆರಿಗೆಗಳು

ಪೆರ್ಜುಂಕ (ಹೊರೆಯ ಮೇಲಿನ ಸುಂಕ), ವಡ್ಡರಾವುಲ (ರಾಜಮನೆತನದ ರಕ್ಷಣೆಗಾಗಿ ಕೊಡುವ ಸುಂಕ), ಬೀಳ್ಕೊಡೆ (ಮಾರಾಟ ತೆರಿಗೆ), ಕಿರುಕುಳ (ಭೂ ಕಂದಾಯ), ಪಣ್ಣಾಯ (ಅಡಿಕೆಯ ಮೇಲಿನ ಸುಂಕ), ವ್ಯಾಪಾರ ಮತ್ತು ವೃತ್ತಿ ಸುಂಕಗಳು ಪ್ರಮುಖ ತೆರಿಗೆಗಳಾಗಿದ್ದವು.

ಕಾಮೆಂಟ್‌ಗಳು