ಭಾರತದಲ್ಲಿ ಬ್ರಿಟೀಷರ ಏಳಿಗೆ
ಭಾರತದಲ್ಲಿ ಬ್ರಿಟೀಷರ ಏಳಿಗೆ
ಕರ್ನಾಟಿಕ್ ಯುದ್ಧಗಳು (1746-1763)
ಕರ್ನಾಟಿಕ್ ಯುದ್ಧಗಳು ಬ್ರಿಟೀಷರು ಮತ್ತು ಫ್ರೆಂಚರ ಮಧ್ಯೆ ಭಾರತದ ಮೇಲೆ ಹಿಡಿತ ಸಾಧಿಸುವ ವಿಷಯವಾಗಿ ನಡೆದವು. ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕಾಶಕ್ತಿ ಹೊಂದಿದ್ದ ಬ್ರಿಟೀಷರು ಭಾರತದಲ್ಲಿ ಮೊದಮೊದಲು ವ್ಯಾಪಾರದ ಕಡೆಗೆ ಮಾತ್ರ ಗಮನ ನೀಡಿ ಅಪಾರ ಸಂಪತ್ತನ್ನು ಗಳಿಸಿದರು. ಇದು ಅವರು ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾರಣವಾಯಿತು.
ಆದರೆ ವ್ಯಾಪಾರಕ್ಕೆಂದು ಬಂದ ಫ್ರೆಂಚರು ಪ್ರಾರಂಭದಲ್ಲಿಯೇ ಭಾರತದ ರಾಜಕೀಯದಲ್ಲಿ ಆಸಕ್ತಿ ತೋರಿಸಿ ವ್ಯಾಪಾರವನ್ನು ಕಡೆಗಣಿಸಿ ದಿವಾಳಿಯಾಗುತ್ತಾ ಸಾಗಿದರು. ಕೊನೆಗೆ ಈ ಎಲ್ಲಾ ಕಾರಣಗಳು ಭಾರತದಲ್ಲಿ ಫ್ರೆಂಚರ ಅವನತಿಗೆ ಮತ್ತು ಬ್ರಿಟೀಷರ ಏಳಿಗೆಗೆ ಕಾರಣವಾಯಿತು.
1ನೇ ಕರ್ನಾಟಿಕ್ ಯುದ್ಧ (1746-1748)
ಪೂರ್ವ ಕರಾವಳಿಯಲ್ಲಿ ತಮಿಳುನಾಡಿನಿಂದ ಒಡಿಶಾವರೆಗೆ ಇರುವ ಕರಾವಳಿ ತೀರವನ್ನು ಕೋರಮಂಡಲ ತೀರ ಎನ್ನುವರು. ಈ ಕೋರಮಂಡಲ ತೀರವನ್ನು ಬ್ರಿಟೀಷರು ಕರ್ನಾಟಿಕ್ ಎನ್ನುತ್ತಿದ್ದರು. ಅರ್ಕಾಟ್ ಇದರ ರಾಜಧಾನಿಯಾಗಿತ್ತು.
1740 ರಲ್ಲಿ ಮರಾಠರು ಅರ್ಕಾಟಿನ ಮೇಲೆ ದಾಳಿ ಮಾಡಿ ಅರ್ಕಾಟಿನ ನವಾಬನಾದ ದೋಸ್ತ್ ಅಲಿಯನ್ನು ಕೊಂದು ಹಾಕಿ ಅವನ ಅಳಿಯನಾದ ಚಂದಾಸಾಹೇಬನನ್ನು ಬಂಧಿಸಿದರು. ಅನ್ವರುದ್ದೀನ್ ಎಂಬುವವನು ಬ್ರಿಟಿಷರ ಬೆಂಬಲದೊಂದಿಗೆ ಅರ್ಕಾಟಿನ ನವಾಬನಾದನು.
1746 ರಲ್ಲಿ ಯುರೋಪಿನಲ್ಲಿ ಆಸ್ಟ್ರಿಯಾ ದೇಶವನ್ನು ವಶಪಡಿಸಿಕೊಳ್ಳಲು ಫ್ರಾನ್ಸ್ ಮತ್ತು ಬ್ರಿಟನ್ ಗಳ ಮಧ್ಯೆ ಯುದ್ಧ ನಡೆಯಿತು. ಈ ಯುದ್ಧದ ಪ್ರಭಾವ ಭಾರತದಲ್ಲೂ ಬೀರಿ ಇಲ್ಲಿಯೂ ಸಹ ಫ್ರೆಂಚರು ಮತ್ತು ಬ್ರಿಟೀಷರ ಮಧ್ಯೆ ಯುದ್ಧ ಶುರುವಾಯಿತು.
ಬ್ರಿಟೀಷರು ಅರ್ಕಾಟಿನ ನವಾಬನಾಗಿ ತಾವು ನೇಮಕ ಮಾಡಿದ್ದ ಅನ್ವರುದ್ದೀನ್ ನ ಸಹಾಯ ಪಡೆದು ಫ್ರೆಂಚರ ಮೇಲೆ ದಾಳಿ ಮಾಡಿದರು. ಮಾರಿಷಸ್ ನ ಫ್ರೆಂಚ್ ಗವರ್ನರ್ ಆಗಿದ್ದ ಲಾಬೋರ್ಡ್ ನಾಯಿಸ್ ಭಾರತದಲ್ಲಿದ್ದ ಫ್ರೆಂಚ್ ಗವರ್ನರ್ ಡೂಪ್ಲೆಯ ಸಹಾಯಕ್ಕೆ ಬಂದನು. ಲಾಬೋರ್ಡ್ ನಾಯಿಸ್ ಅನ್ವರುದ್ದೀನ್ ನನ್ನು ಸೇಂಟ್ ಥೋಮ್ ಕಾಳಗದಲ್ಲಿ ಸೋಲಿಸಿದನು. ಈ ಯುದ್ಧದ ನಂತರ ಭಾರತದ ದೇಶಿಯ ರಾಜರುಗಳ ಅಶಕ್ತತೆ ಗೋಚರವಾಗಿ ಮುಂದೆ ಬ್ರಿಟೀಷರು ಇದನ್ನೇ ಮುಖ್ಯ ಆಯುಧವನ್ನಾಗಿ ಬಳಸಿಕೊಂಡರು.
ಮೊದಲ ಕರ್ನಾಟಿಕ್ ಯುದ್ಧದಲ್ಲಿ ಬ್ರಿಟೀಷರ ಗವರ್ನರ್ ಆಗಿದ್ದವನು ರಾಬರ್ಟ್ ಕ್ಲೈವ್. ಫ್ರೆಂಚರ ಗವರ್ನರ್ ಆಗಿದ್ದವನು ಡೂಪ್ಲೆ.
ಯುರೋಪಿನಲ್ಲಿ ಆಸ್ಟ್ರಿಯಾ ದೇಶದ ವಿಷಯವಾಗಿ ಯುದ್ಧ ಮಾಡುತ್ತಿದ್ದ ಬ್ರಿಟನ್ ಮತ್ತು ಫ್ರಾನ್ಸ್ ಮಧ್ಯೆ ಸಂಧಾನವಾಗಿ ಎಕ್ಸ್ ಲಾ ಚಾಪೆಲ್ ಒಪ್ಪಂದದೊಂದಿಗೆ 1748 ರಲ್ಲಿ ಯುದ್ಧ ಕೊನೆಯಾಯಿತು.
2ನೇ ಕರ್ನಾಟಿಕ್ ಯುದ್ಧ (1749-1754)
1748 ರಲ್ಲಿ ಮರಾಠರಿಂದ ಬಿಡುಗಡೆಯಾದ ಚಂದಾಸಾಹೇಬ ಮತ್ತೇ ಅರ್ಕಾಟಿನ ನವಾಬನಾಗುವ ಆಸೆಯಿಂದ ಅನ್ವರುದ್ದೀನ್ ನ ವಿರುದ್ದ ಯುದ್ಧ ಮಾಡಲು ಯೋಜನೆ ಹಾಕಿದನು. ಆದರೆ ಅನ್ವರುದ್ದೀನ್ ಗೆ ಬ್ರಿಟೀಷರ ಬೆಂಬಲವಿತ್ತು. ಆದ್ದರಿಂದ ಚಂದಾಸಾಹೇಬ ಫ್ರೆಂಚರ ಬೆಂಬಲ ಬಯಸಿ ಅವರ ಪರ ಸೇರಿದನು.
ಹೈದ್ರಾಬಾದಿನ ನವಾಬನಾಗಿದ್ದ ನಿಜಾಮ್ ಉಲ್ ಮುಲ್ಕ್ ಮರಣಿಸಿದಾಗ ಅವನ ಮಗ ನಾಸಿರ್ ಜಂಗ್ ಮತ್ತು ಮೊಮ್ಮಗ ಮುಜಾಫರ್ ಜಂಗ್ ರಲ್ಲಿ ಸಿಂಹಾಸನಕ್ಕಾಗಿ ಕಲಹ ಉಂಟಾಯಿತು. ನಾಸಿರ್ ಜಂಗ್ ಬ್ರಿಟೀಷರ ಪರ ಮತ್ತು ಮುಜಾಫರ್ ಜಂಗ್ ಫ್ರೆಂಚರ ಪರ ಸೇರಿದರು.
ಬ್ರಿಟೀಷರು, ಅನ್ವರುದ್ದೀನ್ ಮತ್ತು ನಾಸಿರ್ ಜಂಗ್ ರು ಸೇರಿ ಒಂದು ಒಕ್ಕೂಟವನ್ನು ರಚಿಸಿಕೊಂಡರು. ಹಾಗೆಯೆ ಫ್ರೆಂಚರು, ಚಂದಾಸಾಹೇಬ ಮತ್ತು ಮುಜಾಫರ್ ಜಂಗ್ ಸೇರಿ ಒಂದು ಒಕ್ಕೂಟವನ್ನು ರಚಿಸಿಕೊಂಡರು. ಇವೆ ಕಾರಣಗಳು ಮುಂದೆ 2ನೇ ಕರ್ನಾಟಿಕ್ ಯುದ್ಧಕ್ಕೆ ಕಾರಣವಾಯಿತು.
ಫ್ರೆಂಚರ ಒಕ್ಕೂಟವು ಅಂಬೂರು ಕಾಳಗದಲ್ಲಿ ಅನ್ವರುದ್ದೀನ್ ನನ್ನು ಕೊಂದು ಹಾಕಿತು. ಅನ್ವರುದ್ದಿನ್ ಮಗ ಮಹ್ಮದ್ ಅಲಿ ತಿರುಚನಾಪಳ್ಳಿಗೆ ಹೋಗಿ ಬ್ರಿಟೀಷರ ಬಳಿ ಆಶ್ರಯ ಪಡೆದನು. ನಾಸಿರ್ ಜಂಗ್ ನು ಮರಣಿಸಿದ ಕಾರಣ ಫ್ರೆಂಚರ ಪರ ಇದ್ದ ಮುಜಾಫರ್ ಜಂಗ್ ಹೈದರಾಬಾದಿನ ನವಾಬನಾದನು.
ಕಾರಣಾಂತರಗಳಿಂದ ಫ್ರೆಂಚ್ ಸರ್ಕಾರ ಡೂಪ್ಲೆಯನ್ನು ವಾಪಸು ಕರೆಸಿಕೊಂಡಿತು. ಡೂಪ್ಲೆಯ ಸ್ಥಾನಕ್ಕೆ ಗೊಡ್ಡೆ ಹೋ ಅಧಿಕಾರಕ್ಕೆ ಬಂದನು. ಗೊಡ್ಡೆ ಹೋ ಬ್ರಿಟೀಷರೊಂದಿಗೆ ರಾಜಿಯನ್ನು ಬಯಸಿದ ಕಾರಣ 1754 ರಲ್ಲಿ ಫ್ರೆಂಚರ ಮತ್ತು ಬ್ರಿಟೀಷರ ಮಧ್ಯೆ ಪಾಂಡಿಚೆರಿ ಒಪ್ಪಂದವಾಗಿ 2ನೇ ಕರ್ನಾಟಿಕ್ ಯುದ್ದವು ಕೊನೆಗೊಂಡಿತು.
2ನೇ ಕರ್ನಾಟಿಕ್ ಯುದ್ಧದ ಸಮಯದಲ್ಲಿ ರಾಬಟ್ ಕ್ಲೈವ್ ಬ್ರಿಟೀಷರ ಗವರ್ನರ್ ಆಗಿದ್ದನು. ಡೂಪ್ಲೆ ಫ್ರೆಂಚರ ಗವರ್ನರ್ ಆಗಿದ್ದನು.
3ನೇ ಕರ್ನಾಟಿಕ್ ಯುದ್ಧ (1758-1763)
ಯುರೋಪಿನಲ್ಲಿ 1756 ರಲ್ಲಿ ಮತ್ತೇ ಬ್ರಿಟನ್ ಮತ್ತು ಫ್ರಾನ್ಸ್ ಗಳ ಮಧ್ಯೆ ಯುದ್ಧ ಶುರುವಾಯಿತು. ಈ ಯುದ್ದವು 1756 ರಿಂದ 1763 ರ ವರೆಗೆ 7 ವರ್ಷಗಳ ಕಾಲ ನಡೆದ ಕಾರಣ ಇದನ್ನು ಸಪ್ತವಾರ್ಷಿಕ ಕದನ ಎನ್ನುವರು.
ಈ ಸಪ್ತವಾರ್ಷಿಕ ಯುದ್ಧದ ಪರಿಣಾಮ ಭಾರತದ ಮೇಲೂ ಬೀರಿ 1758 ರಲ್ಲಿ ಭಾರತದಲ್ಲಿ ಬ್ರಿಟೀಷರಿಗೂ ಮತ್ತು ಫ್ರೆಂಚರಿಗೂ 3 ನೇ ಕರ್ನಾಟಿಕ್ ಯುದ್ಧ ಪ್ರಾರಂಭವಾಯಿತು.
1757 ರ ಪ್ಲಾಸಿ ಕದನದಲ್ಲಿ ಬಂಗಾಳವನ್ನು ವಶಪಡಿಸಿಕೊಂಡು ಬ್ರಿಟೀಷರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾಗಿದ್ದರು. ಬ್ರಿಟೀಷರು ಬಂಗಾಳದಲ್ಲಿದ್ದ ಫ್ರೆಂಚರ ಚಂದ್ರನಾಗೂರ್ ಅನ್ನು ವಶಪಡಿಸಿಕೊಂಡರು. ಫ್ರೆಂಚರು ತಮಿಳುನಾಡಿನಲ್ಲಿದ್ದ ಬ್ರಿಟೀಷರ ಸೇಂಟ್ ಡೇವಿಡ್ ಕೋಟೆಯನ್ನು ವಶಪಡಿಸಿಕೊಂಡರು. 1760 ಜನವರಿ 21 ರಂದು ನಡೆದ ವಾಂಡಿವಾಷ್ ಯುದ್ಧದಲ್ಲಿ ಬ್ರಿಟೀಷರ ಸೇನಾನಿ ಸರ್ ಐರ್‍ಕೂಟ್ ಫ್ರೆಂಚ್ ಸೇನಾನಿ ಕೌಂಟ್ ಡಿ ಲ್ಯಾಲಿಯನ್ನು ಸೋಲಿಸಿದನು. 3 ನೇ ಕರ್ನಾಟಿಕ್ ಯುದ್ಧವು 1763 ರ ಪ್ಯಾರಿಸ್ ಒಪ್ಪಂದೊಂದಿಗೆ ಕೊನೆಗೊಂಡಿತು.
ಈ ಯುದ್ದಧ ಸಮಯದಲ್ಲಿ ರಾಬರ್ಟ್ ಕ್ಲೈವ್ ಬ್ರಿಟೀಷರ ಗವರ್ನರ್ ಆಗಿದ್ದನು ಮತ್ತು ಡೂಪ್ಲೆ ಫ್ರೆಂಚರ ಗವರ್ನರ್ ಆಗಿದ್ದನು.
ಕರ್ನಾಟಿಕ್ ಯುದ್ಧಗಳ ನಂತರ ಬ್ರಿಟೀಷರ ಪ್ರಬಲ ವಿರೋಧಿಗಳಾಗಿದ್ದ ಫ್ರೆಂಚರು ಸೋತು ಭಾರತದಿಂದ ಪೂರ್ಣವಾಗಿ ಕಾಲ್ತೆಗೆದರು. ಭಾರತದಲ್ಲಿ ಬ್ರಿಟೀಷರ ಏಕ ಚಕ್ರಾಧಿಪತ್ಯ ಸ್ಥಾಪಿಸಲು ಈ ಯುದ್ಧಗಳು ಪ್ರಮುಖ ಕಾರಣಗಳಾದವು.
ಪ್ಲಾಸಿ ಕದನ (1757)
ಭಾರತದಲ್ಲಿ ಆಂಗ್ಲರ ರಾಜಕೀಯ ಸ್ಥಿರತೆ ಮತ್ತು ಪ್ರಾಬಲ್ಯತೆಗೆ ಕಾರಣವಾದ ಮತ್ತೊಂದು ಪ್ರಮುಖ ಅಂಶ 1757 ರ ಪ್ಲಾಸಿ ಕದನ.
ಬಂಗಾಳದ ನವಾಬ ಅಲಿವರ್ಧಿಖಾನ್ ತೆರಿಗೆ ಕಟ್ಟದೇ ವ್ಯಾಪಾರ ಮಾಡಿಕೊಳ್ಳಲು ಬ್ರಿಟಿಷರಿಗೆ ಅನುಮತಿ ನೀಡಿದ್ದನು. ಅಲಿವರ್ಧಿಖಾನನ ನಂತರ ಅವನ ಮೊಮ್ಮಗ ಸಿರಾಜ್ ಉದ್ ದೌಲ್ ಸಿಂಹಾಸನವೇರಿದನು.
ತನ್ನ ವಿರೋಧಿಗಳಾದ ಶೌಕತ್ ಖಾನ್ ಮತ್ತು ದಿವಾನ ರಾಜವಲ್ಲಭನ ಮಗ ಕೃಷ್ಣರಾಜನಿಗೆ ಬ್ರಿಟೀಷರು ಆಶ್ರಯ ನೀಡಿದ್ದು ಸಿರಾಜ್ ಉದ್ ದೌಲ್ ನಿಗೆ ಸಹಿಸಲಾಗಲಿಲ್ಲ. ಅಲ್ಲದೇ ಬ್ರಿಟೀಷರು ತಮಗೆ ನೀಡಿದ್ದ ದಸ್ತಕಗಳನ್ನು ದುರುಪಯೋಗ ಮಾಡಿಕೊಂಡಿದ್ದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟವಾಗುತ್ತಿತ್ತು. ಇದಲ್ಲದೆ ಬ್ರಿಟಿಷರು ಅನೇಕ ಕೋಟೆಗಳನ್ನು ಕಟ್ಟಿಕೊಂಡಿದ್ದು ಸಹ ಸಿರಾಜ್ ಉದ್ ದೌಲ್ ನಿಗೆ ಅಸಹನೆ ಮೂಡಿಸಿತು.
ಈ ಎಲ್ಲಾ ಕಾರಣಗಳಿಂದ ಸಿರಾಜ್ ಉದ್ ದೌಲ್ ವ್ಯಾಪಾರಕ್ಕೆಂದು ಬಂದವರು ಇಲ್ಲಿ ಕೋಟೆಗಳನ್ನು ಕಟ್ಟಿಕೊಳ್ಳುವ ಅವಶ್ಯಕತೆಯಿಲ್ಲವೆಂದು ಮತ್ತು ಇನ್ನು ಮುಂದೆ ಬ್ರಿಟಿಷರು ತೆರಿಗೆ ಕಟ್ಟಿ ವ್ಯಾಪಾರ ಮಾಡಬೇಕೆಂದು ಬ್ರಿಟೀಷರಿಗೆ ಆದೇಶಿಸಿದನು. ಬ್ರಿಟೀಷರು ಇದನ್ನು ಕಡೆಗಣಿಸಿದಾಗ ಸಿರಾಜ್ ನು 1756 ರಲ್ಲಿ ಕಲ್ಕತ್ತಾ ಮತ್ತು ಖಾಸಿಂ ಬಜಾರ್ ಗಳ ಮೇಲೆ ದಾಳಿ ಮಾಡಿ ಬ್ರಿಟೀಷರ ಪೋರ್ಟ್ ವಿಲಿಯಂ ಕೋಟೆಯನ್ನು ನಾಶಪಡಿಸಿದನು.
1756 ಜೂನ್ 23 ರಂದು ಸಿರಾಜ್ ಉದ್ ದೌಲ್ ನು ಬ್ರಿಟೀಷರ ಹೆಂಗಸರು ಮತ್ತು ಮಕ್ಕಳನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿದನು ಈ ದುರಂತದಲ್ಲಿ ಸು 123ಕ್ಕೂ ಅಧಿಕ ಜನ ಮರಣಿಸಿದರು. ಇದನ್ನು ಕಪ್ಪುಕೋಣೆ ದುರಂತ ಎನ್ನುವರು. ಈ ಘಟನೆಯ ನಂತರ ಸಿರಾಜ್ ಉದ್ ದೌಲ್ ಮತ್ತು ರಾಬರ್ಟ್ ಕ್ಲೈವ್ ಮಧ್ಯದಲ್ಲಿ 1757 ಫೆಬ್ರವರಿ 9 ರಂದು ಅಲಿನಗರ ಶಾಂತಿ ಒಪ್ಪಂದ ಏರ್ಪಟ್ಟಿತು. ಆದರೆ ಆ ಒಪ್ಪಂದವು ಮುರಿದುಬಿದ್ದು ಬ್ರಿಟೀಷರು ಸಿರಾಜ್ ಉದ್ ದೌಲ್ ನ ಮೇಲೆ ಯುದ್ಧ ಸಾರಿದರು.
ಸಿರಾಜ್ ಉದ್ ದೌಲ್ ನ ದಿವಾನನಾಗಿದ್ದ ಮೀರ್ ಜಾಫರ್ ಮತ್ತು ಬಂಗಾಳದ ಪ್ರಸಿದ್ಧ ವರ್ತಕನಾಗಿದ್ದ ರಾಯ್ ದುರ್ಲಬ್ ರು ಬ್ರಿಟೀಷರ ಜೊತೆ ಕೈ ಸೇರಿಸಿದರು. 1757 ಜೂನೆ 23 ರಂದು ನಡೆದ ಪ್ಲಾಸಿ ಕದನದಲ್ಲಿ ಸಿರಾಜ್ ಉದ್ ದೌಲ್ ಮರಣಿಸಿದನು.
ಬ್ರಿಟೀಷರು ಮತ್ತು ಮೀರ್ ಜಾಫರ್ ನಿಗೆ ಆದ ಒಪ್ಪಂದದಂತೆ ಮೀರ್ ಜಾಫರ್ ಬಂಗಾಳದ ನವಾಬನಾದನು. ಕಾಲಾನುಕ್ರಮದಲ್ಲಿ ಮೀರ್ ಜಾಫರ್ ಬ್ರಿಟೀಷರ ಇಚ್ಚೆಯಂತೆ ನಡೆದುಕೊಳ್ಳಲು ನಿರಾಕರಿಸಿದಾಗ ಬ್ರಿಟೀಷರು ಮೀರ್ ಜಾಫರ್ ನನ್ನು ತೆಗೆದು ಹಾಕಿ ಮೀರ್ ಖಾಸಿಂನನ್ನು ಸಿಂಹಾಸನವೇರಿಸಿದರು. ನವಾಬನಾದ ಮೀರ್ ಖಾಸಿಂ ಬ್ರಿಟೀಷರಿಗೆ ಬರದ್ವಾನ್, ಮಿಡ್ನಾಪುರ್ ಮತ್ತು ಚಿತ್ತಗಾಂವ್ ಪ್ರದೇಶಗಳ ಜಮೀನ್ದಾರಿ ಹಕ್ಕುಗಳನ್ನು ಬಿಟ್ಟುಕೊಟ್ಟನು.
ಬಕ್ಸಾರ್ ಕದನ (1764)
ನವಾಬನಾದ ನಂತರ ಮೀರ್ ಖಾಸಿಂ ಸಹ ಬ್ರಿಟೀಷರಿಗೆ ವಿರುದ್ಧವಾದನು. ಬ್ರಿಟೀಷರ ದಸ್ತಕಗಳನ್ನು ರದ್ದು ಮಾಡಿದನು (ದಸ್ತಕಗಳು ಎಂದರೆ ತೆರಿಗೆ ಕಟ್ಟದೆ ವ್ಯಾಪಾರ ಮಾಡಲು ನೀಡಿದ ಅನುಮತಿ ಪತ್ರಗಳು). ಬ್ರಿಟೀಷರು ಆ್ಯಡಮ್ ಎಂಬುವವನ ನೇತೃತ್ವದಲ್ಲಿ ಮೀರ್ ಖಾಸಿಂ ನ ಮೇಲೆ ದಾಳಿ ಮಾಡಿದಾಗ ಖಾಸಿಂ ಪಾಟ್ನಾಕ್ಕೆ ಓಡಿಹೋದನು.
ನಂತರ ಮೀರ್ ಖಾಸಿಂ ಔಧ್ ನ ನವಾಬ ಷೂಜಾ ಉದ್ ದೌಲ್ ಮತ್ತು ಮೊಘಲ್ ಅರಸ 2ನೆ ಷಾ ಆಲಂ ನ ಸಹಾಯ ಪಡೆದು ಒಕ್ಕೂಟ ಸೈನ್ಯವನ್ನು ಕಟ್ಟಿದನು. ಬ್ರಿಟೀಷರು ಹೆಕ್ಟರ್ ಮನ್ರೋನ ನೇತೃತ್ವದಲ್ಲಿ ಮೀರ್ ಖಾಸಿಂನ ಒಕ್ಕೂಟ ಸೈನ್ಯದ ಮೇಲೆ 1764 ಅಕ್ಟೋಬರ್ 22 ರಂದು ಯುದ್ಧ ಸಾರಿದರು. ಇದೆ ಬಕ್ಸರ್ ಕದನ.
ಯುದ್ಧದಲ್ಲಿ ಮೀರ್ ಖಾಸಿಂ ಫಲಾಯನವಾದನು. ಷೂಜಾ ಉದ್ ದೌಲ್ ನು ಬ್ರಿಟೀಷರೊಂದಿಗೆ ಅಲಹಾಬಾದ್ ಒಪ್ಪಂದ ಮಾಡಿಕೊಂಡನು. 2ನೇ ಷಾ ಆಲಂ ಬಂಗಾಳ, ಬಿಹಾರ ಮತ್ತು ಒಡಿಶಾಗಳ ದಿವಾನಿ ಹಕ್ಕನ್ನು ಬ್ರಿಟೀಷರಿಗೆ ಬಿಟ್ಟುಕೊಟ್ಟನು.
ಬ್ರಿಟೀಷರು ಮತ್ತೇ ಮೀರ್ ಜಾಫರ್ ನನ್ನು ಬಂಗಾಳದ ನವಾಬನನ್ನಾಗಿ ಅಧಿಕಾರಕ್ಕೆ ತಂದರು. ಅಲ್ಲದೇ ಬಂಗಾಳದಲ್ಲಿ ದ್ವಿಮುಖ ಸರ್ಕಾರವನ್ನು ಜಾರಿಗೆ ತಂದರು.
ಆಂಗ್ಲೋ ಮರಾಠ ಯುದ್ಧಗಳು (1775-1818)
ಪ್ರಥಮ ಆಂಗ್ಲೋ ಮರಾಠ ಯುದ್ಧ (1775-82)
ಅಧಿಕಾರಕ್ಕಾಗಿ ಪೇಶ್ವೆಗಳ ಮಧ್ಯೆ ನಡೆದ ಕಲಹದಲ್ಲಿ ಪೇಶ್ವೆ ರಘುನಾಥರಾಯನು ಬಾಂಬೆ ಗವರ್ನರ್ ಎಲ್ಫಿನ್ ಸ್ಟೋನ್ ಜೊತೆಗೆ ಸೂರತ್ ಒಪ್ಪಂದ ಮಾಡಿಕೊಂಡು ಮರಾಠರ ಮೇಲೆ ಬ್ರಿಟೀಷರು ದಂಡೆತ್ತಿ ಬರುವಂತೆ ಮಾಡಿದನು. ಪೇಶ್ವೆಗಳ ಮುಖಂಡ ನಾನಾ ಫಡ್ನವೀಸ್ ನು ಇದನ್ನರಿತು ಗವರ್ನರ್ ಜನರಲ್ ವಾನ್ ಹೇಸ್ಟಿಂಗ್ ಜೊತೆಗೆ ಪುರಂದರ ಒಪ್ಪಂದ ಮಾಡಿಕೊಂಡು ಸೂರತ್ ಒಪ್ಪಂದವನ್ನು ಮುರಿದು ಹಾಕಿದನು. ನಂತರ ಹಲವು ವೈಮನಸ್ಸುಗಳ ಕಾರಣ ಮರಾಠರಿಗೂ ಮತ್ತು ಬ್ರಿಟೀಷರಿಗೆ ಯುದ್ಧವಾಗಿ ಕೊನೆಗೆ ಸಾಲ್ವಾಯ್ ಒಪ್ಪಂದದೊಂದಿಗೆ ಈ ಯುದ್ಧವು ಮುಕ್ತಾಯವಾಯಿತು. ಒಪ್ಪಂದದ ಪ್ರಕಾರ ಸಾಲ್ಸೇಟ್ ಆಂಗ್ಲರ ವಶವಾಯಿತು. ಈ ಯುದ್ಧದ ಅವಧಿಯಲ್ಲಿ ವಾರನ್ ಹೇಸ್ಟಿಂಗ್ಸ್ ಬಂಗಾಳದ ಗವರ್ನರ್ ಜನರಲ್ ಆಗಿದ್ದನು.
2ನೇ ಆಂಗ್ಲೋ ಮರಾಠ ಯುದ್ಧ (1803-05)
ಪೇಶ್ವೆ ಪದವಿಗಾಗಿ ಮರಾಠರಲ್ಲಿ ಆಂತರಿಕ ಕಲಹಗಳು ಅಧಿಕವಾದಾಗ ಇದರ ಲಾಭ ಪಡೆದು ಬ್ರಿಟಿಷರು ಮರಾಠರ ಮೇಲೆ ಯುದ್ಧ ಸಾರಿದರು. ಯುದ್ದದಲ್ಲಿ ಸೋತ ಪೇಶ್ವೆ 2ನೇ ಬಾಜಿರಾಯನು ಬ್ರಿಟೀಷರೊಂದಿಗೆ ಬೆಸ್ಸೀನ್ ಒಪ್ಪಂದ ಮಾಡಿಕೊಂಡು ಸಹಾಯಕ ಸೈನ್ಯ ಪದ್ಧತಿಗೆ ಒಪ್ಪಿಕೊಂಡನು. ನಂತರ ಭೋಂಸ್ಲೆಯು 1803 ರಲ್ಲಿ ದೇವಗಾಂವ್ ಒಪ್ಪಂದದಂತೆ ಮತ್ತು ಸಿಂಧ್ಯಾನು 1805 ರಲ್ಲಿ ಸೂರಜ್ ಅರ್ಜುನ್ ಗಾಂವ್ ಒಪ್ಪಂದದಂತೆ ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟರು. ಆಂಗ್ಲೋ ಮರಾಠ ಯುದ್ಧಗಳ ಸಮಯದಲ್ಲಿ ಲಾರ್ಡ್ ವೆಲ್ಲೆಸ್ಲಿ ಗವರ್ನರ್ ಜನರಲ್ ಆಗಿದ್ದನು.
3ನೇ ಆಂಗ್ಲೋ ಮರಾಠ ಯುದ್ಧ (1817-18)
ಸಹಾಯಕ ಸೈನ್ಯ ಪದ್ಧತಿಯಿಂದ ಹೊರಬಂದು ಸ್ವತಂತ್ರವಾಗಿ ಆಡಳಿತ ನಡೆಸಲು ಇಚ್ಚಿಸಿದ ಮರಾಠರು ಬ್ರಿಟಿಷರ ಮೇಲೆ ದಾಳಿ ಮಾಡಲು ಒಕ್ಕೂಟ ಸೈನ್ಯ ರಚಿಸಿಕೊಂಡರು. ಆದರೆ ಮರಾಠರ ಒಕ್ಕೂಟ ಸೈನ್ಯವು ಬ್ರಿಟಿಷ್ ಸೇನಾನಿ ಚಾರ್ಲ್ಸ್ ನೇಪಿಯರ್ ನ ವಿರುದ್ಧ ಅಷ್ಟಿ ಮತ್ತು ಕೋರೆಗಾಂವ್ ಕದನಗಳಲ್ಲಿ ಸಂಪೂರ್ಣವಾಗಿ ಸೋತಿತು. ಯುದ್ಧದಲ್ಲಿ ಸೋತ ನಂತರ ಭೋಂಸ್ಲೆಯು ಬ್ರಿಟೀಷರೊಂದಿಗೆ ದಿಯೋಗಾಂವ್ ಒಪ್ಪಂದ ಮಾಡಿಕೊಂಡನು.
ಯುದ್ದದ ನಂತರ ಗವರ್ನರ್ ಜನರಲ್ ಲಾರ್ಡ್ ಮಾರ್ಕ್ವೆಸ್ಟ್ ಹೇಸ್ಟಿಂಗ್ಸ್ ಪೇಶ್ವೆ ಹುದ್ದೆಯನ್ನು ರದ್ದು ಮಾಡಿದನು. ಪೇಶ್ವೆ 2ನೇ ಬಾಜಿರಾಯನಿಗೆ ವಾರ್ಷಿಕ 8 ಲಕ್ಷ ಮಾಸಾಶನ ನೀಡುವ ಒಪ್ಪಂದವಾಯಿತು
ಆಂಗ್ಲೋ ಮೈಸೂರು ಕದನಗಳು (1767-1799)
ಪ್ರಥಮ ಆಂಗ್ಲೋ ಮೈಸೂರು ಯುದ್ಧ (1767-69)
ಕರ್ನಾಟಕದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಅರಸನೆಂದರೆ ಹೈದರ್ ಅಲಿ. ಹೈದರ್ ಅಲಿ ಹಾಗೂ ಹೈದರಾಬಾದಿನ ನಿಜಾಮ ಮೀರ್ ನಿಜಾಮ್ ಅಲಿಖಾನ್ ನ ಮೇಲೆ ಬ್ರಿಟೀಷರು ದಾಳಿ ಮಾಡಿದರು. ಪ್ರಾರಂಭದಲ್ಲಿ ಹೈದರ್ ಅಲಿ ಸೋತಾಗ ಹೈದರಾಬಾದಿನ ನಿಜಾಂ ಬ್ರಿಟೀಷರೊಂದಿಗೆ ಮಚಲಿಪಟ್ಟಣ ಒಪ್ಪಂದ ಮಾಡಿಕೊಂಡು ಅವರ ಪರ ಸೇರಿದನು. ನಂತರ ಬ್ರಿಟಿಷರು ಹೈದರಾಬಾದ್ ನ ನಿಜಾಮನ ಜೊತೆ ಸೇರಿ ಮೈಸೂರಿನ ಮೇಲೆ ದಾಳಿ ಮಾಡಿದಾಗ ಯುದ್ಧದಲ್ಲಿ ಹೈದರಾಲಿ ವಿಜಯ ಸಾಧಿಸಿದನು. ಕೊನೆಗೆ ಹೈದರ್ ಅಲಿ ಮತ್ತು ಬ್ರಿಟೀಷರ ನಡುವೆ 1769 ಏಪ್ರಿಲ್ 4 ರಂದು ಮದ್ರಾಸ್ ಒಪ್ಪಂದವಾಯಿತು.
2ನೇ ಆಂಗ್ಲೋ ಮೈಸೂರು ಕದನ (1780-84)
1781 ರಲ್ಲಿ ನಡೆದ ಪೋರ್ಟೊನೋವಾ ಯುದ್ಧದಲ್ಲಿ ಬ್ರಿಟೀಷರ ಸೇನಾನಿ ಸರ್ ಐರ್ ಕೂಟ್ ಹೈದರಾಲಿಯನ್ನು ಸೋಲಿಸಿದನು. ಹೈದರಾಲಿ ಯುದ್ದದಲ್ಲಿ ಸೋತು ಅನಾರೋಗ್ಯಕ್ಕೀಡಾಗಿ ಮರಣಿಸಿದಾಗ ಟಿಪ್ಪು ಯುದ್ದ ಮುಂದುವರೆಸಿದನು. ಯುದ್ಧದಲ್ಲಿ ಟಿಪ್ಪು ಗೆದ್ದು 1784 ಮಾರ್ಚ್ 11 ರಂದು ವಾರ್ನ್ ಹೇಸ್ಟಿಂಗ್ ಜೊತೆಗೆ ಮಂಗಳೂರು ಒಪ್ಪಂದ ಮಾಡಿಕೊಂಡನು.
3ನೇ ಆಂಗ್ಲೋ ಮೈಸೂರು ಕದನ (1790-92)
ಬ್ರಿಟೀಷರ ಸೇನಾನಿ ಮೆಡೊಸ್ ನ ಸಹಾಯ ಪಡೆದು ತಿರುವಾಂಕೂರಿನ ಅರಸ ರಾಜಾರಾಮವರ್ಮ ಟಿಪ್ಪುವಿನ ಪ್ರದೇಶಗಳನ್ನು ಆಕ್ರಮಿಸಿದನು. ಟಿಪ್ಪು ಮೆಡೋಸ್ ನನ್ನು ಸೋಲಿಸಿದಾಗ ಗವರ್ನರ್ ಜನರಲ್ ಲಾರ್ಡ್ ಕಾರ್ನ್ ವಾಲೀಸ್ ತಾನೇ ಶ್ರೀರಂಗಪಟ್ಟಣವನ್ನು ಆಕ್ರಮಿಸಿದನು. ಕೊನೆಗೆ ಸೋತ ಟಿಪ್ಪು 1792 ಮಾರ್ಚ್ 22 ರಂದು ಲಾರ್ಡ್ ಕಾರ್ನ್ ವಾಲೀಸ್ ಜೊತೆಗೆ ಶ್ರೀರಂಗಪಟ್ಟಣ ಒಪ್ಪಂದ ಮಾಡಿಕೊಂಡನು. ಒಪ್ಪಂದದನ್ವಯ 3 ಕೋಟಿ ಪರಿಹಾರ ನೀಡಿ ತನ್ನಿಬ್ಬರು ಮಕ್ಕಳಾದ ಅಬ್ದುಲ್ ಕಾಲಿಕ್ ಮತ್ತು ಮುಜಾವುದ್ದೀನ್ ರನ್ನು ಒತ್ತೆಯಾಗಿಟ್ಟನು.
4ನೇ ಆಂಗ್ಲೊ ಮೈಸೂರು ಯುದ್ಧ (1799)
3ನೇ ಆಂಗ್ಲೋ ಮೈಸೂರು ಕದನದ ಸೋಲಿನಿಂದ ಬ್ರಿಟೀಷರ ಮೇಲಿನ ಪ್ರತೀಕಾರ ಭಾವನೆ ಟಿಪ್ಪುವಿಗೆ ಅಧಿಕವಾಗಿತ್ತು. ಟಿಪ್ಪು ಬ್ರಿಟೀಷರ ವಿರೋಧಿಗಳಾದ ಫ್ರೆಂಚರ ಜೊತೆ ಸೇರಿ ಫ್ರೆಂಚ್ ಜಾಕೋಬಿನ್ ಕ್ಲಬ್ ಅನ್ನು ಸ್ಥಾಪಿಸಿದನು. ನೆಪೋಲಿಯನ್ ನ ಸಹಾಯಕ್ಕಾಗಿ ಫ್ರಾನ್ಸ್ ಗೆ ಮತ್ತು ಅಫ್ಘಾನಿಸ್ತಾನದ ಜಮಾಲ್ ಷಾ ನ ಆಸ್ಥಾನಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಆದರೆ ಫ್ರಾನ್ಸ್ ಕ್ರಾಂತಿಯ ಪರಿಣಾಮ ಫ್ರೆಂಚರಿಂದ ಸಹಾಯ ಬರುವುದು ಕಷ್ಟವಾಗಿತ್ತು. ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯು ಟಿಪ್ಪುವನ್ನು ಸಹಾಯಕ ಸೈನ್ಯ ಪದ್ಧತಿಗೆ ಸೇರಲು ಒತ್ತಾಯಿಸಿದನು. ಟಿಪ್ಪು ಒಪ್ಪದೇ ಹೋದಾಗ ಕಾರ್ನ್‍ವಾಲೀಸ್ ಜನರಲ್ ಹ್ಯಾರಿಸ್ ಜೊತೆ ಸೇರಿ ಟಿಪ್ಪುವಿನ ಮೇಲೆ ದಾಳಿ ಮಾಡಿದನು. ಮಳವಳ್ಳಿ ಯುದ್ದದಲ್ಲಿ ಹ್ಯಾರಿಸ್ ಟಿಪ್ಪುವನ್ನು ಕೊಲೆ ಮಾಡಿದನು.
ಆಂಗ್ಲೊ ಸಿಖ್ ಕದನಗಳು ( 1845-49)
ಪಂಜಾಬಿನ ಸಿಂಹ ಎಂದೇ ಖ್ಯಾತನಾಗಿದ್ದ ರಣಜಿತ್ ಸಿಂಗನು ಪರಸ್ಪರ ಒಬ್ಬರ ಮೇಲೆ ಒಬ್ಬರು ಆಕ್ರಮಣ ಮಾಡಿಕೊಳ್ಳದಿರಲು 1809 ರಲ್ಲಿ ಬ್ರಿಟಿಷರೊಂದಿಗೆ ಅಮೃತಸರ ಒಪ್ಪಂದ ಮಾಡಿಕೊಂಡಿದ್ದನು. ಸುಖರ್ ಚಾಕಿಯಾ ಎಂಬುದು ರಣಜಿತ್ ಸಿಂಗ್ ಕಟ್ಟಿದ ಸಿಖ್ ಸೈನ್ಯವಾಗಿತ್ತು
1ನೇ ಆಂಗ್ಲೋ ಸಿಖ್ ಯುದ್ಧ (1845-46)
ರಾಜಕುಮಾರ ದುಲೀಪ್ ಸಿಂಗ ನ ರಾಜಪ್ರತಿನಿಧಿಯಾಗಿ ರಾಣಿ ಜಿಂದಾಲ್ ಪಂಜಾಬನ್ನು ಆಳುತ್ತಿದ್ದಳು. ಲಾಲ್ ಸಿಂಗ್ ಎಂಬ ಪ್ರಧಾನಿ ತಾನೇ ಅಧಿಕಾರವನ್ನೆಲ್ಲಾ ಪಡೆದು ಅಮೃತಸರ ಒಪ್ಪಂದವನ್ನು ಮುರಿದು ಬ್ರಿಟಿಷರ ಮೇಲೆ ಯುದ್ಧ ಸಾರಿದನು. ಅದರೆ ಅಲಿವಾಲ್ ಕದನದಲ್ಲಿ ಬ್ರಿಟೀಷರು ಲಾಲ್ ಸಿಂಗ್ ನನ್ನು ಸಂಪೂರ್ಣವಾಗಿ ಸೋಲಿಸಿದರು. ಲಾಲ್ ಸಿಂಗ್ ಬ್ರಿಟೀಷರೊಂದಿಗೆ ಲಾಹೋರ್ ಒಪ್ಪಂದ ಮಾಡಿಕೊಂಡನು.
ಬ್ರಿಟೀಷರು ಅಧಿಕಾರವನ್ನು ಮತ್ತೇ ದುಲೀಪ್ ಸಿಂಗ್ ನಿಗೆ ವಹಿಸಿ ಅಲ್ಲಿ ಬ್ರಿಟಿಷ್ ರೆಸಿಡೆಂಟ್ ಒಬ್ಬನನ್ನು ನೇಮಿಸಿದರು.
2ನೇ ಆಂಗ್ಲೋ ಸಿಖ್ ಯುದ್ಧ (1848-49)
ಮುಲ್ತಾನಿನ ಸಿಖ್ ನಾಯಕನಾದ ಮುಲ್ ರಾಜ್ ಎಂಬುವವನು ಬ್ರಿಟೀಷರ ವಿರುದ್ಧ ಯುದ್ಧ ಸಾರಿದನು. ಯುದ್ಧದಲ್ಲಿ ಸಿಖ್ಖರು ಮತ್ತೇ ಸೋತರು. ಗವರ್ನರ್ ಜನರಲ್ ಡಾಲ್ ಹೌಸಿಯು ಪಂಜಾಬನ್ನು ವಶಪಡಿಸಿಕೊಂಡು ದುಲೀಪ್ ಸಿಂಗನಿಗೆ ವಿಶ್ರಾಂತಿ ವೇತನ ನೀಡುವ ವ್ಯವಸ್ಥೆ ಮಾಡಿಸಿದನು. ದುಲೀಪ್ ಸಿಂಗ್ ತನ್ನ ಬಳಿಯಿದ್ದ ಕೊಹಿನೂರ್ ವಜ್ರವನ್ನು ಡಾಲ್ ಹೌಸಿಗೆ ಉಡುಗೊರೆಯಾಗಿ ನೀಡಿದನು.
ಮೇಲೆ ನಡೆದ ಯುದ್ಧಗಳಲ್ಲದೇ ಬ್ರಿಟೀಷರ ಸಾಮ್ರಾಜ್ಯ ವಿಸ್ತರಣಾ ನೀತಿಗಳು ಸಹ ಬ್ರಿಟೀಷರ ಪ್ರಾಬಲ್ಯಕ್ಕೆ ಮತ್ತು ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದವು.
ಸಹಾಯಕ ಸೈನ್ಯ ಪದ್ಧತಿ (1798)
ಲಾರ್ಡ್ ವೆಲ್ಲೆಸ್ಲಿಯು ಇದನ್ನು ಜಾರಿಗೆ ತಂದನು. ಹೈದ್ರಾಬಾದಿನ ನಿಜಾಮ ಮೀರ್ ಅಲಿ ಖಾನ್ ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ಅರಸ. ಮೈಸೂರು, ಮರಾಠ ಸಾಮ್ರಾಜ್ಯ, ತಿರುವಾಂಕೂರು, ಔಧ್ ಮುಂತಾದವು ಈ ನೀತಿಗೆ ಒಳಪಟ್ಟ ಇತರ ಪ್ರಮುಖ ಪ್ರಾಂತ್ಯಗಳು.
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ (1848)
ಲಾರ್ಡ್ ಡೌಲ್ ಹೌಸಿಯು ಇದನ್ನು ಜಾರಿಗೆ ತಂದನು. ಸತಾರಾ (1848), ಸಂಭಲ್ಪುರ (1849), ಜೈಪುರ (1849), ಭಗತ್ (1850), ಉದಯಪುರ (1850), ಝಾನ್ಸಿ (1853), ನಾಗ್ಪುರ (1854), ಔಧ್ (1856), ಈ ನೀತಿಗೆ ಒಳಪಟ್ಟ ಪ್ರಮುಖ ರಾಜ್ಯಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ