ಭಾರತಕ್ಕೆ ಯುರೋಪಿಯನ್ನರ ಆಗಮನ

  ಭಾರತಕ್ಕೆ ಯುರೋಪಿಯನ್ನರ ಆಗಮನ

1453 ರಲ್ಲಿ ಆಟೋಮನ್ ಟರ್ಕರು ಕಾನ್ ಸ್ಟಾಂಟಿನೋಪಲ್ (ಈಗಿನ ಟರ್ಕಿ ದೇಶದ ರಾಜಧಾನಿ ಇಸ್ತಾಂಬುಲ್) ನಗರವನ್ನು ವಶಪಡಿಸಿಕೊಂಡಾಗ ಯುರೋಪ್ ದೇಶಗಳಿಗೆ ಪೌರಾತ್ಯ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಕಡೆದುಹೊಯಿತು.

ಆಗ ಯುರೋಪಿಯನ್ನರು ಭಾರತ ಸೇರಿದಂತೆ ಇತರ ಪೌರಾತ್ಯ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಸಾಧಿಸಲು ಸಮುದ್ರ ಮಾರ್ಗವನ್ನು ಅನ್ವೇಷಿಸಲು ನಿರ್ಧರಿಸಿದರು.

ಪೋರ್ಚುಗೀಸರು (1498-1961)

ಪೋರ್ಚುಗೀಸರು ಭಾರತಕ್ಕೆ ಬಂದ ಪ್ರಥಮ ಯುರೋಪಿಯನ್ನರು. ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಪೋರ್ಚುಗಲ್ ನ ರಾಜಕುಮಾರ ಪ್ರಿನ್ಸ್ ಹೆನ್ರಿ ಸಹಕಾರ ನೀಡಿದನು. ಹಾಗಾಗಿ ಇವನನ್ನು ಪ್ರಿನ್ಸ್ ಆಫ್ ನ್ಯಾವಿಗೇಟರ್ ಎನ್ನುವರು.

ಭಾರತಕ್ಕೆ ಮೊದಲು ಜಲಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದವನು ಬಾರ್ತ್ ಲೊಮಿಯೋ ಡಯಾಸ್. ನಂತರ ಪೋರ್ಚುಗಲ್ ಅರಸ ಇಮ್ಯಾನುಯೆಲ್ ನ ಸಹಕಾರದಿಂದ ವಾಸ್ಕೋ ಡ ಗಾಮ 17 ಮೇ 1498 ರಂದು ಭಾರತದ ಕಲ್ಲಿಕೋಟೆಯ ಕುಪಡ್ ಎಂಬ ಸ್ಥಳವನ್ನು ತಲುಪಿದನು. ಆಗ ಅಲ್ಲಿ ಜಾಮೋರಿನ್ (ಮಾನವಿಕ್ರಮ) ಎಂಬ ಅರಸ ಆಳ್ವಿಕೆ ನಡೆಸುತ್ತಿದ್ದನು.

ಪೋರ್ಚುಗೀಸರು ಭಾರತಕ್ಕೆ ಬಂದಾಗ ಮಹಾರಾಷ್ಟ್ರದ ಗೊರವಪುರಿ ಎಂಬಲ್ಲಿನ ಗುಹೆಗಳಿಗೆ ಎಲಿಫೆಂಟಾ ಗುಹೆಗಳೆಂದು ನಾಮಕರಣ ಮಾಡಿದರು.

ವಾಸ್ಕೋ ಡ ಗಾಮ ಪೋರ್ಚುಗಲ್ ಗೆ ಹಿಂದಿರುಗಿದ ನಂತರ 1500 ರಲ್ಲಿ ಪೆಡ್ರೊ ಅಲ್ವಾರಿಸ್ ಕೆಬ್ರಾಲ್ ಎಂಬಾತನು ಭಾರತಕ್ಕೆ ಬಂದು ಹೋದನು

1501 ರಲ್ಲಿ ಮತ್ತೇ ಭಾರತಕ್ಕೆ ಬಂದ ವಾಸ್ಕೋ ಡ ಗಾಮನು ಕೊಚ್ಚಿನ್, ಕಲ್ಲಿಕೋಟೆ (ಕ್ಯಾಲಿಕಟ್) ಮತ್ತು ಕಣ್ಣಾನೂರ್ ಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿದನು.

ಫ್ರಾನ್ಸಿಸ್ಕೋ ಡಿ ಅಲ್ಮೆಡಾ 1505 ರಲ್ಲಿ ಪ್ರಥಮ ಪೋರ್ಚುಗಲ್ ವೈಸ್ರಾಯ್ ಆಗಿ ಭಾರತಕ್ಕೆ ಬಂದನು. ಇವನು ಕೊಚ್ಚಿನ್, ಕಣ್ಣೂರ್ (ಕ್ಯಾನೋವರ್) ಮತ್ತು ಅಂಜುದ್ವೀಪಗಳಲ್ಲಿ ವ್ಯಾಪಾರ ಕೆಂದ್ರಗಳನ್ನು ಸ್ಥಾಪಿಸಿದನು.

ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯವನ್ನು ಸ್ಥಾಪಿಸುವುದು ಅಲ್ಮೆಡಾನ ಉದ್ಧೇಶವಾಗಿರಲಿಲ್ಲ. ಸಂಪತ್ತನ್ನು ಗಳಿಸುವುದೇ ಪ್ರಧಾನವಾಗಿತ್ತು. ಹಾಗಾಗಿ ಭಾರತದ ಕರಾವಳಿಯಲ್ಲಿ ಸೈನಿಕ ಪಡೆ ನಿಯಮಿಸಿ ಅರಬ್ಬಿ ಸಮುದ್ರದ ಮೇಲೆ ಹಿಡಿತ ಸಾಧಿಸಿ ಭಾರತ ಬೇರೆ ದೇಶಗಳೊಂದಿಗೆ ವ್ಯಾಪಾರ ಮಾಡದಂತೆ ನಿರ್ಬಂಧಿಸಿದನು. ಇವನ ಈ ನೀತಿಯನ್ನು ಬ್ಲೂ ವಾಟರ್ ಪಾಲಿಸಿ (ನೀಲಿ ನೀರಿನ ನೀತಿ) ಎನ್ನಲಾಗಿದೆ. 1509 ರಲ್ಲಿ ಅಲ್ಮೆಡಾನು ಪೋರ್ಚುಗಲ್ಲಿಗೆ ಹಿಂದಿರುಗಿದನು.

1509 ರಲ್ಲಿ ವೈಸ್ರಾಯ್ ಆಗಿ ಭಾರತಕ್ಕೆ ಬಂದ ಅಲ್ಫಾನ್ಸೋ ಡಿ ಅಲ್ಬುಕರ್ಕ್ ಜಾಮೋರಿನ್ ಅರಸನನ್ನು ಕೇರಳದಿಂದ ಓಡಿಸಿ ಕಲ್ಲಿಕೋಟೆಯಲ್ಲಿ ಡುಯರ್ಟ್ ಪಾಚಿಕೋ ಎಂಬ ಅಧಿಕಾರಿಯನ್ನು ನೇಮಿಸಿದನು. ಈ ಮೂಲಕ ಭಾರತದಲ್ಲಿ ಪೋರ್ಚುಗೀಸ್‍ರ ಆಡಳಿತಕ್ಕೆ ನಾಂದಿ ಹಾಕಿದನು. ಇವನನ್ನು ಭಾರತದ ಪೋರ್ಚುಗೀಸ್ ಸಾಮ್ರಾಜ್ಯದ ನಿರ್ಮಾಪಕ ಎನ್ನಲಾಗಿದೆ.

ಅಲ್ಬುಕರ್ಕ್ 1510 ರಲ್ಲಿ ಕೃಷ್ಣದೇವರಾಯನ ನೆರವನ್ನು ಪಡೆದು ಬಿಜಾಪುರದ ಸುಲ್ತಾನ 4ನೇ ಮಹ್ಮದ್ ಷಾ ನಿಂದ ಗೋವಾವನ್ನು ವಶಪಡಿಸಿಕೊಂಡನು.

ಪ್ರಮುಖ ವ್ಯಾಪಾರ ಕೇಂದ್ರಗಳು: ಪಶ್ಚಿಮ ಕರಾವಳಿಯ ಡಿಯು - ದಮನ್ (ಗುಜರಾತ್); ಚೌಲ್, ಸಾಲ್ಸೇಟ್, ಬೆಸ್ಸೀನ್, ಬಾಂಬೆ, ದಾದ್ರ - ನಗರ ಹವೇಲಿ (ಮಹಾರಾಷ್ಟ್ರ); ಕೊಚ್ಚೀನ್, ಕಂಗ್ರಾನೂರ್, ಕಣ್ಣಾನೂರ್ (ಕೇರಳ); ಕ್ವಿಲಾನ್ (ಗೋವಾ). ಪೂರ್ವ ಕಾರಾವಳಿಯ ಸಾಂಥೋಂ (ತಮಿಳುನಾಡು); ಹೂಗ್ಲಿ (ಪ.ಬಂಗಾಳ).

1500 ರಲ್ಲಿ ಕ್ರೈಸ್ತ ಮತ ಪ್ರಚಾರಕ್ಕಾಗಿ ಪೋರ್ಚುಗಲ್‍ನ ಧರ್ಮ ಪ್ರಚಾರಕರು ಭಾರತದ ಅಂಜುದ್ವೀಪದಲ್ಲಿ ಬಂದಿಳಿದರು. ಲೂಯಿಸ್ ಎಲ್ವೆಡಾರ್ ಎಂಬ ಪಾದ್ರಿಯು ಚರ್ಚುಗಳನ್ನು ನಿರ್ಮಿಸಲು ವಿಜಯನಗರದ ಅರಸ ವೀರನರಸಿಂಹನ ಆಸ್ಥಾನಕ್ಕೆ ಭೇಟಿ ನೀಡಿದ್ದನು.

1556 ರಲ್ಲಿ ಪೋರ್ಚುಗೀಸರು ಗೋವಾದಲ್ಲಿ ಮುದ್ರಣಾಲಯವನ್ನು ಸ್ಥಾಪಿಸಿದರು. ಇದರ ಪ್ರಮುಖ ಉದ್ದೇಶ ಬೈಬಲ್ ಅನ್ನು ಮುದ್ರಿಸಿ ಹಂಚುವುದಾಗಿತ್ತು.

ಪೋರ್ಚುಗೀಸರು ಕ್ರೈಸ್ತ ಧರ್ಮ ಪ್ರಚಾರದ ಅಂಗವಾಗಿ 1540 ರಲ್ಲಿ ಹಿಂದೂ ದೇವಾಲಯಗಳ ನಾಶದ ಆಜ್ಞೆಯನ್ನು ಹೊರಡಿಸಿದರು. ಆದರೆ 1567 ರಲ್ಲಿ ನಡೆದ ದಯಾಪುರಂ ಎಂಬಲ್ಲಿನ ಧಾರ್ಮಿಕ ಸಮ್ಮೇಳನದಲ್ಲಿ ಬಲಾತ್ಕಾರದ ಮತಾಂತರ ಅಥವಾ ದೇವಾಲಯಗಳ ನಾಶ ಸರಿಯಲ್ಲವೆಂದು ತೀರ್ಮಾನಿಸಲಾಯಿತು.

ಕ್ರೈಸ್ತ ಮತ ಪ್ರಚಾರಕ್ಕಾಗಿ ಭಾರತಕ್ಕೆ ಬಂದ ಸಂತ ಎಕ್ಸೇವಿಯರ್ ನ ಸಮಾಧಿಯು ಗೋವಾದ ಚರ್ಚಿನಲ್ಲಿದೆ.

ಪೋರ್ಚುಗೀಸರು ಆಲೂಗಡ್ಡೆ, ಟೊಮ್ಯಾಟೋ, ಅನಾನಾಸ್, ಪರಂಗಿಹಣ್ಣು, ಗೋಡಂಬಿ, ಮೆಣಸಿನಕಾಯಿ, ನೆಲಗಡಲೆ, ಮೆಕ್ಕೆಜೋಳ, ಈರುಳ್ಳಿ ಮತ್ತು ತಂಬಾಕನ್ನು ಭಾರತಕ್ಕೆ ಪರಿಚಯಿಸಿದರು.

ಪೋರ್ಚುಗೀಸರ ಅವನತಿಗೆ ಕಾರಣಗಳು

ಹಿಂದೂಗಳನ್ನು ಹಿಂಸೆಯ ಮೂಲಕ ಬಲವಂತವಾಗಿ ಕ್ರೈಸ್ತಮತಕ್ಕೆ ಪರಿವರ್ತನೆ ಮಾಡಲು ಪ್ರಯತ್ನಿಸಿದ್ದು. ಮತ್ತು ಗೋವಾದಲ್ಲಿ ಅನೇಕ ದೇವಾಲಯಗಳನ್ನು ನಾಶಗೊಳಿಸಿದ್ದು

ಪೋರ್ಚುಗೀಸರಿಗೆ ನೆರವು ನೀಡುತ್ತಿದ್ದ ವಿಜಯನಗರ ಸಾಮ್ರಾಜ್ಯ ಅವನತಿ

1556 ರಲ್ಲಿ ಅಕ್ಬರ್ ಅಧಿಕಾರಕ್ಕೆ ಬಂದಾಗ ಪೋರ್ಚುಗೀಸರ ಪ್ರಾಬಲ್ಯಕ್ಕೆ ಕಡಿವಾಣ ಹಾಕಿದನು.

ಇಂಗ್ಲಿಷರುಫ್ರೆಂಚರು ಮತ್ತು ಡಚ್ಚರು ಪೋರ್ಚುಗೀಸರೊಂದಿಗೆ ವ್ಯಾಪಾರ ಮತ್ತು ಸಾಮ್ರಾಜ್ಯ ವಿಸ್ತರಣೆಯಲ್ಲಿ ಪೈಪೋಟಿಗಿಳಿದಿದ್ದು. 1612 ರಲ್ಲಿ ನಡೆದ ಸಾಲ್ವಿ ಕದನದಲ್ಲಿ ಬ್ರಿಟಿಷರು ಪೋರ್ಚುಗೀಸರನ್ನು ಸೋಲಿಸಿದರು.

1580 ರಲ್ಲಿ ಸ್ಪೇನ್ ಅರಸ ಫಿಲಿಪ್ ಪೋರ್ಚುಗಲ್ ಅನ್ನು ಸ್ವಾಧೀನಪಡಿಸಿಕೊಂಡನು. ಈ ಮೂಲಕ ಪೋರ್ಚುಗೀಸರ ಹಿತಾಸಕ್ತಿಗಳನ್ನು ಕಡೆಗಣಿಸಲಾಯಿತು

1674 ರಲ್ಲಿ ಮರಾಠ ಸಾಮ್ರಾಜ್ಯ ಅಸ್ಥಿತ್ವಕ್ಕೆ ಬಂದು ಪೋರ್ಚುಗೀಸರಿಗೆ ಮುಳುವಾಯಿತು.

ಪೋರ್ಚುಗೀಸರು ದಕ್ಷಿಣ ಅಮೇರಿಕಾ ಖಂಡದ ಕಡೆಗೆ ಹೆಚ್ಚಿನ ಗಮನ ಹರಿಸಿ ಭಾರತದ ಕಡೆ ನಿರ್ಲಕ್ಷ್ಯ ತಾಳಿದರು

ಪೋರ್ಚುಗೀಸರು ಎಲ್ಲರಿಗಿಂತಲೂ ಮೊದಲು ಭಾರತಕ್ಕೆ ಬಂದು ಎಲ್ಲರಿಗಿಂತಲೂ ಕೊನೆಯದಾಗಿ ಭಾರತವನ್ನು ತೊರೆದರು. ಪೋರ್ಚುಗೀಸರ ವಶದಲ್ಲಿದ್ದ ಗೋವಾವನ್ನು ಭಾರತವು 1961 ರಲ್ಲಿ ಆಪರೇಷನ್ ವಿಜಯ್ ಎಂಬ ಮಿಲಿಟರಿ ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಂಡಿತು.

ಡಚ್ಚರು (1596-1792)

ಡಚ್ಚರು ಹಾಲೆಂಡ್ (ನೆದರ್ಲ್ಯಾಂಡ್) ದೇಶದವರು. ಕಾರ್ಲೇನಿಯಸ್ ಹೌಟ್‍ಮನ್ ಎಂಬ ಡಚ್ ವರ್ತಕ 1596 ರಲ್ಲಿ ಭಾರತಕ್ಕೆ ಬಂದನು. 1602 ರಲ್ಲಿ ಡಚ್ಚರು ಡಚ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಪ್ರಾರಂಭಿಸಿದರು.

1605 ರಲ್ಲಿ ಮಚಲಿಪಟ್ಟಣದಲ್ಲಿ ಇವರ ಮೊದಲ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದರು. ಪುಲಿಕಾಟ್ ಇವರ ಆಡಳಿತ ರಾಜಧಾನಿಯಗಿತ್ತು.

ಪ್ರಮುಖ ವ್ಯಾಪಾರ ಕೇಂದ್ರಗಳು: ಮಚಲಿಪಟ್ಟಣ (ಆಂಧ್ರಪ್ರದೇಶ); ಟುಟಿಕಾರನ್, ಕಾರೈಕಲ್, ಪುಲಿಕಾಟ್, ನಾಗಪಟ್ಣಂ (ತಮಿಳುನಾಡು); ಬ್ರೋಚ್, ಸೂರತ್ (ಗುಜರಾತ್); ಬಾಲಸೋರ್ (ಒಡಿಶಾ);  ಚಿನ್ಸೂರ್, ಕಾಸಿಂ ಬಜಾರ್ (ಪ.ಬಂಗಾಳ) ಪಾಟ್ನಾ (ಗುಜರಾತ್) ಕಣ್ಣಾನೂರ್,  ಕೊಚ್ಚಿನ್ (ಕೇರಳ).

ಡಚ್ಚರ ಅವನತಿಗೆ ಕಾರಣಗಳು

ಭಾರತಕ್ಕಿಂತಲೂ ಹೆಚ್ಚಾಗಿ ಆಗ್ನೇಯ ಎಷ್ಯಾ ದೇಶಗಳತ್ತ ಗಮನ ಹರಿಸಿದರು

ಆಡಳಿತಕ್ಕಿಂತಲೂ ಹೆಚ್ಚಾಗಿ ವ್ಯಾಪಾರಕ್ಕೆ ಪ್ರಾಮುಖ್ಯತೆ ನೀಡಿದ ಕಾರಣ ಭಾರತದಲ್ಲಿ ನೆಲೆಯೂರಲು ಕಷ್ಟವಾಯಿತು

1759 ರ ಬಿದ್ರಾ ಕದನದಲ್ಲಿ ರಾಬರ್ಟ್ ಕ್ಲೈವ್ ಡಚ್ಚರನ್ನು ಪೂರ್ತಿಯಾಗಿ ಸೋಲಿಸಿದನು

ಬ್ರಿಟೀಷರು (1600-1947)

1599 ಸೆಪ್ಟೆಂಬರ್ 22 ರಂದು ಫೌಂಡರ್ಸ್ ಹಾಲ್ ನಲ್ಲಿ ಲಾರ್ಡ್ ಮೇಯರ್ಸ್ ನ ಅಧ್ಯಕ್ಷತೆಯಲ್ಲಿ ಆಂಗ್ಲ ವ್ಯಾಪಾರಿಗಳು ಸಭೆ ಸೇರಿ ಪೌರಾತ್ಯ ದೇಶಗಳೊಡನೆ (ಭಾರತ, ಚೀನಾ, ಇಂಡೋನೇಷ್ಯಾ ಮುಂತಾದ ದೇಶಗಳು) ವ್ಯಾಪಾರ ನಡೆಸಲು ಅನುಮತಿ ನೀಡಬೇಕೆಂದು ಅರಸ 8ನೇ ಹೆನ್ರಿಗೆ ಮನವಿ ಮಾಡಿದರು

ಈ ಮನವಿಯನ್ನು ಒಪ್ಪಿ ರಾಣಿ 1ನೇ ಎಲಿಜಬೆತ್  1600 ಡಿಸೆಂಬರ್ 31 ರಂದು “ದಿ ಗವರ್ನರ್ ಅಂಡ್ ಕಂಪೆನಿ ಆಫ್ ಮರ್ಚೆಂಟ್ಸ್  ಆಪ್ ಲಂಡನ್ ಟ್ರೇಡಿಂಗ್ ಇನ್ ಟು ದಿ ಈಸ್ಟ್ ಇಂಡೀಸ್” ಎಂಬ ಚಾರ್ಟರ್ ಕಾಯ್ದೆಯ ಮೇರೆಗೆ ಆಂಗ್ಲ ವ್ಯಾಪಾರಿ ಸಂಸ್ಥೆಗೆ 15 ವರ್ಷಗಳ ಅವಧಿಗೆ ವ್ಯಾಪಾರ ಮಾಡಲು ಪರವಾನಗಿಯನ್ನು ನೀಡಿದಳು.

ಈ ಕಂಪೆನಿಯು ಥಾಮಸ್ ಸ್ಮಿತ್ ಎಂಬ ಗವರ್ನರ್ ಮತ್ತು ಇನ್ನಿತರ 24 ಸದಸ್ಯರಿಂದ ಕೂಡಿದ ಒಂದು ಸಮಿತಿಯ ನಿಯಂತ್ರಣದಲ್ಲಿತ್ತು ಈ ಸಮಿತಿಯು ಮುಂದೆ ನಿರ್ದೇಶಕರ ಮಂಡಳಿ (ಕೋರ್ಟ್ ಆಫ್ ಡೈರೆಕ್ಟರ್ಸ್) ಎಂದು ಬದಲಾಯಿತು. ಕಾಲಾನಂತರದಲ್ಲಿ ಮಾಲೀಕರ ಮಂಡಳಿ (ಕೋರ್ಟ್ ಆಫ್ ಪ್ರೊಪ್ರೈಟರ್ಸ್) ಎಂದು ಬದಲಾಯಿತು.

1608 ರಲ್ಲಿ ಮೊಘಲ್ ಚಕ್ರವರ್ತಿ ಜಹಾಂಗೀರನ ಆಸ್ಥಾನಕ್ಕೆ ಬಂದ ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿ ಪಡೆಯಲು ಪರವಾನಗಿ ಪಡೆಯುವಲ್ಲಿ ವಿಫಲನಾದನು. ಆದರೆ 1615 ರಲ್ಲಿ ಜಹಾಂಗೀರನ ಆಸ್ಥಾನಕ್ಕೆ ಬಂದ ಸರ್ ಥಾಮಸ್ ರೋ ವ್ಯಾಪಾರ ಮಾಡಲು ಅನುಮತಿ ಪಡೆದು ಸೂರತ್ ನಲ್ಲಿ ಮೊದಲ ವ್ಯಾಪಾರ ಕೇಂದ್ರವನ್ನು ತೆರೆದನು

ಇಂಗ್ಲೆಂಡ್ ನ ಅರಸ 1ನೇ ಜೇಮ್ಸ್ ಭಾರತದಲ್ಲಿ ವ್ಯಾಪಾರ ಮಾಡುತ್ತಿದ್ದ ಕಂಪೆನಿಗೆ ವ್ಯಾಪಾರ ರಿಯಾಯಿತಿಗಳನ್ನು ದೊರಕಿಸಿಕೊಡಲು ಸರ್ ಥಾಮಸ್ ರೋನನ್ನು ಜಹಾಂಗೀರನ ಆಸ್ಥಾನಕ್ಕೆ ಕಳುಹಿಸಿದನು. ರಾಣಿ ಎಲಿಜಬೆತ್ 15 ವರ್ಷದ ಅವಧಿಗೆ ನಿಗದಿ ಪಡಿಸಿದ್ದ ವ್ಯಾಪಾರ ಅವಧಿಯನ್ನು ಬದಲಾಯಿಸಿ ಅನಿರ್ಧಿಷ್ಟಾವಧಿಯವರೆಗೂ ವ್ಯಾಪಾರ ಮಾಡಿಕೊಳ್ಳಲು ಅನುಮತಿ ನೀಡಿದನು.

1639 ರಲ್ಲಿ ಸರ್ ಫ್ರಾನ್ಸಿಸ್ ಡೇ ಎಂಬಾತನು ಚಂದ್ರಗಿರಿ ರಾಜನಿಂದ ಒಂದು ಸ್ಥಳವನ್ನು ಕೊಂಡುಕೊಂಡು ಅಲ್ಲಿ ಸೇಂಟ್ ಜಾರ್ಜ್ ಕೋಟೆಯನ್ನು ಕಟ್ಟಿದನು ಮುಂದೆ ಇದೇ ಮದ್ರಾಸ್ ನಗರವಾಗಿ ಬೆಳೆಯಿತು.

1661 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು ಅರಸ ಚಾರ್ಲ್ಸ್ ನಿಂದ ನಾಣ್ಯ ಮುದ್ರಿಸುವ ಮತ್ತು ಯುದ್ಧ ಒಪ್ಪಂದ ಮಾಡಿಕೊಳ್ಳುವ ಅಧಿಕಾರವನ್ನು ಪಡೆಯಿತು.

1661 ರಲ್ಲಿ ಪೋರ್ಚುಗಲ್ ರಾಜಕುಮಾರಿ ಕ್ಯಾತರೀನ್ ಳನ್ನು ಇಂಗ್ಲೆಂಡಿನ ಅರಸ ಚಾರ್ಲ್ಸ್ ಮದುವೆಯಾದಾಗ ಪೋರ್ಚುಗೀಸ್ ಅರಸ 4ನೇ ಜಾನ್ ಮುಂಬೈಯನ್ನು ಚಾರ್ಲ್ಸ್ ಗೆ ಉಡುಗೊರೆಯ ರೂಪದಲ್ಲಿ ನೀಡಿದನು. ನಂತರ ಮುಂಬೈ ಗವರ್ನರ್ ಆಗಿ ಬಂದ ಜೆರಾಲ್ಡ್ ಅಂಗೀರ್ ನು 1720 ರಲ್ಲಿ ಮುಂಬೈನಲ್ಲಿ ಒಂದು ಕೋಟೆಯನ್ನು ಕಟ್ಟಿ ಪ್ರಮುಖ ವ್ಯಾಪಾರ ಕೇಂದ್ರವಾಗಿಸಿ ಮುಂಬೈ ಒಂದು ಮಹಾನಗರವಾಗಿ ಬೆಳೆಯಲು ಕಾರಣವಾದನು.

1690 ರಲ್ಲಿ ಬ್ರಿಟೀಷರು ಬಂಗಾಳ ಪ್ರಾಂತ್ಯವನ್ನು ಮೊಘಲರಿಂದ ವಶಪಡಿಸಿಕೊಂಡರು. ಕಲಿಕಾಟ್, ಗೋವಿಂದಪುರ ಮತ್ತು ಸುತ್ನತಿ ಎಂಬ ಹಳ್ಳಿಗಳ ಸುತ್ತಲೂ ಚಾಬ್ ಚಾರ್ನಾಕ್ ಎಂಬ ಬ್ರಿಟಿಷ್ ಅಧಿಕಾರಿ ಪೋರ್ಟ್ ವಿಲಿಯಂ ಕೋಟೆಯನ್ನು ಕಟ್ಟಿದನು. ಮುಂದೆ ಇದೇ ಕಲ್ಕತ್ತಾ ಮಹಾನಗರವಾಗಿ ಬೆಳೆಯಿತು. 1911 ರ ವರೆಗೆ ಕೋಲ್ಕತ್ತಾ ಬ್ರಿಟಿಷರ ರಾಜಧಾನಿಯಾತ್ತು ನಂತರ ದೆಹಲಿ ರಾಜಧಾನಿಯಾಯಿತು..

ವಿಲಿಯಂ ಹ್ಯಾಮಿಲ್ಟನ್ ಎಂಬ ಬ್ರಿಟಿಷ್ ವೈದ್ಯ ಮೊಘಲ್ ದೊರೆ ಫರೂಕ್ಸಿಯಾರ್ ನ ರೋಗವನ್ನು ಗುಣಪಡಿಸಿದ ಕಾರಣ ಫರೂಕ್ಸಿಯಾರ್ 1717 ರಲ್ಲಿ ಬ್ರಿಟೀಷರಿಗೆ ದಸ್ತಕಗಳನ್ನು ನೀಡಿದನು. (ದಸ್ತಕಗಳು ಎಂದರೆ ತೆರಿಗೆ ಕಟ್ಟದೆ ವ್ಯಾಪಾರ ಮಾಡಿಕೊಳ್ಳಲು ನೀಡುವ ಅನುಮತಿ). ಇದನ್ನು ಕಂಪೆನಿಯ ಮ್ಯಾಗ್ನಾಕಾರ್ಟ ಎನ್ನುವರು.

ಪ್ರಮುಖ ವ್ಯಾಪಾರ ಕೇಂದ್ರಗಳು : ಪಶ್ಚಿಮ ಕರಾವಳಿ ತೀರದ ಸೂರತ್ಬ್ರೋಚ್ಅಹ್ಮದಾಬಾದ್ (ಗುಜರಾತ್)ಮುಂಬೈ (ಮಹಾರಾಷ್ಟ್ರ)ಹರಿಹರಪುರಆಮಗಾಂವ್ (ಕರ್ನಾಟಕ) ಮತ್ತು ಪೂರ್ವ ಕರಾವಳಿ ತೀರದ ಹೂಗ್ಲಿಖಾಸಿಂ ಬಜಾರ್ಕಲ್ಕತ್ತಾ (ಪ.ಬಂಗಾಳ)ಮಚಲಿಪಟ್ಣಂ (ಆಂಧ್ರಪ್ರದೇಶ) ಬಾಲಸೂರ್ (ಒಡಿಶಾ)ಮದ್ರಾಸ್ (ತಮಿಳುನಾಡು) ಮತ್ತು ಆಗ್ರಾ (ಉ.ಪ್ರದೇಶ)

ಡ್ಯಾನಿಷರು (1620-1869)

ಡೆನ್ಮಾರ್ಕ್ ಮತ್ತು ನಾರ್ವೆ ದೇಶಗಳ ಸಹಯೋಗದೊಂದಿಗೆ ಡೇನ್ ಈಸ್ಟ್ ಇಂಡಿಯಾ ಕಂಪೆನಿಯು 1620 ರಲ್ಲಿ ಪ್ರಾರಂಭವಾಯಿತು. ಡೇನಿಷ್ ಅರಸ 4ನೇ ಕ್ರಿಶ್ಚಿಯನ್ ನ ಅನುಮತಿ ಪಡೆದು ಒವೆ ಗ್ಜೆಡ್ಡೆ ಎಂಬ ಡೇನಿಷ್ ವ್ಯಾಪಾರಿ ಮೊದಲ ಬಾರಿಗೆ ಭಾರತಕ್ಕೆ ಬಂದಿಳಿದನು.

ಅಂಡಮಾನ್-ನಿಕೋಬಾರ್ ದ್ವೀಪಗಳುತಮಿಳುನಾಡಿನ ತರಂಗಂಬಾಡಿಮತ್ತು ಪ.ಬಂಗಾಳದ ಸೆರಾಂಪೂರ್ ಇವರ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು

ಫ್ರೆಂಚರು (1664-1954)

ವ್ಯಾಪರಕ್ಕಾಗಿ ಭಾರತಕ್ಕೆ ಕೊನೆಯದಾಗಿ ಬಂದ ಯುರೋಪಿಯನ್ನರೆಂದರೆ ಫ್ರೆಂಚರು. 1664 ರಲ್ಲಿ ಫ್ರಾನ್ಸ್ ಅರಸ 14ನೇ ಲೂಯಿ ಮತ್ತು ಫ್ರೆಂಚ್ ಅರ್ಥಸಚಿವ ಕೋಲ್ಬಟ್ ಸೇರಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಸ್ಥಾಪಿಸಿದರು.

1667 ರಲ್ಲಿ ಸೂರತ್ ನಲ್ಲಿ ಫ್ರೆಂಚರ ಮೊದಲ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಲಾಯಿತು. ಪಾಂಡಿಚೆರಿ ಫ್ರೆಂಚರ ಪ್ರಮುಖ ಆಡಳಿತ ಕೇಂದ್ರ ಮತ್ತು ರಾಜಧಾನಿಯಾಗಿತ್ತು.

ಫ್ರಾಂಕೊಯಿಸ್ ಮಾರ್ಟಿನ್ ವಿಜಯಪುರದ ಸುಲ್ತಾನ್ ಷೇರ್ ಖಾನ್ ಲೂದಿಯಿಂದ  1674 ರಲ್ಲಿ ಒಂದು ಗ್ರಾಮವನ್ನು ದತ್ತು ಪಡೆದನು. ಮುಂದೆ ಇದೇ ಗ್ರಾಮ ಪಾಂಡಿಚೆರಿಯಾಗಿ (ಪುದುಚೆರಿ) ಬೆಳೆಯಿತು. ಪಾಂಡಿಚೆರಿಯು ಫ್ರೆಂಚರ ರಾಜಧಾನಿಯಾಗಿತ್ತು.

ಫ್ರೆಂಚರು ಬಂಗಾಳದ ರಾಜ್ಯಪಾಲ ಷಹಿಸ್ತಾಖಾನ್ ನ ಅನುಮತಿ ಪಡೆದು ಚಂದ್ರನಾಗೂರ್ ಎಂಬಲ್ಲಿ ವ್ಯಾಪಾರಿ ಕೇಂದ್ರವನ್ನು ಸ್ಥಾಪಿಸಿದರು.

1739 ರಲ್ಲಿ ಪಾಂಡಿಚೆರಿಗೆ ಗವರ್ನರ್ ಆಗಿ ಬಂದ ಡೂಮ್ ಕಾರೈಕಲ್ ಎಂಬಲ್ಲಿ ಮತ್ತೊಂದು ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದನು.

ಪ್ರಮುಖ ವ್ಯಾಪಾರ ಕೇಂದ್ರಗಳು : ಸೂರತ್ (ಗುಜರಾತ್); ಮಾಹೆ (ಕೇರಳ); ಮಚಲಿಪಟ್ಣಂ, ಯಾನಂ (ಆಂದ್ರಪ್ರದೇಶ); ಬಾಲಸೋರ್ (ಒಡಿಶಾ); ಹೂಗ್ಲಿ, ಕಾಸಿಂ ಬಜಾರ್, ಚಂದ್ರನಾಗೂರ್ (ಪ.ಬಂಗಾಳ) ಪಾಂಡಿಚೆರಿ, ವಾಲಿಕರಡಿಪುರಂ, ಕಾರೈಕಲ್ (ತಮಿಳನಾಡು)

1746 ರಲ್ಲಿ ಗವರ್ನರ್ ಆಗಿ ಬಂದ ಡೂಪ್ಲೆಯು ಫ್ರೆಂಚರ ಅತ್ಯಂತ ಸಮರ್ಥ ಗವರ್ನರ್ ಆಗಿದ್ದನು. ಇವನ ಕಾಲದಲ್ಲಿ ಬ್ರಿಟಿಷರಿಗೆ ಮತ್ತು ಫ್ರೆಂಚರಿಗೆ ಕರ್ನಾಟಿಕ್ ಯುದ್ದಗಳು ನಡೆದು ಕೊನೆಗೆ ಫ್ರೆಂಚರು ಸೋತು ಭಾರತದಿಂದ ಕಾಲ್ತೆಗೆದರು.

ಫ್ರೆಂಚರ ಅವನತಿಗೆ ಕಾರಣಗಳು

ಬ್ರಿಟೀಷರಿಗೆ ಮುಕ್ತ ವ್ಯಾಪಾರ ಮತ್ತು ಆಡಳಿತ ಅಧಿಕಾರ ನೀಡಲಾಗಿತ್ತು. ಆದರೆ ಫ್ರೆಂಚರು ಫ್ರೆಂಚ್ ಸರ್ಕಾರದ ಅಧೀನದಲ್ಲಿದ್ದು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಗಿರುವಷ್ಟು ಸ್ವಾತಂತ್ರ್ಯವಿರಲಿಲ್ಲ.

ಬ್ರಿಟೀಷರು ತಮ್ಮ ಪ್ರಥಮ ಪ್ರಾಶಸ್ತ್ಯವನ್ನು ವ್ಯಾಪಾರಕ್ಕೆ ನೀಡಿದ್ದರು ಹಾಗಾಗಿ ಮುಂದೆ ಯುದ್ಧ ಸಂದರ್ಭದಲ್ಲಿ ಆರ್ಥಿಕವಾಗಿ ಸಶಕ್ತರಾಗಿದ್ದ ಬ್ರಿಟೀಷರು ಫ್ರೆಂಚರ ವಿರುದ್ಧ ಜಯಗಳಿಸಿದರು. ಆದರೆ ಫ್ರೆಂಚರು ತಮ್ಮ ಪ್ರಥಮ ಪ್ರಾಶಸ್ತ್ಯವನ್ನು ಆಡಳಿತದ ಕಡೆಗೆ ನೀಡಿ ವ್ಯಾಪಾರವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಮುಂದೆ ಫ್ರೆಂಚ್ ಕಂಪೆನಿ ದಿವಾಳಿಯತ್ತ ಸಾಗಿತು.

ಭಾರತದ ಆರ್ಥಿಕ ರಾಜಧಾನಿಯಾಗಿದ್ದ ಬಂಗಾಳ ಬ್ರಿಟೀಷರ ವಶವಾಗಿದ್ದು ಬ್ರಿಟೀಷರ ಪ್ರಾಬಲ್ಯಕ್ಕೆ ಕಾರಣವಾಯಿತು.

ಎಲ್ಲಕ್ಕಿಂತಲೂ ಮಿಗಿಲಾಗಿ ಪ್ರಪಂಚದಲ್ಲೇ ಪ್ರಬಲ ನೌಕಾಶಕ್ತಿ ಹೊಂದಿದ್ದ ಬ್ರಿಟೀಷರು ಸುಲಭವಾಗಿ ಭಾರತದ ವ್ಯಾಪಾರ ಸಾಮ್ರಾಜ್ಯದಲ್ಲಿ ತಮ್ಮ ಅಸ್ತಿತ್ವ ಸ್ಥಾಪಿಸಿಕೊಂಡಿದ್ದರು

ಕಾಮೆಂಟ್‌ಗಳು