ಬಾದಾಮಿ ಚಾಲುಕ್ಯರು
ಬಾದಾಮಿ ಚಾಲುಕ್ಯರು
ಸಂಪೂರ್ಣ ಕರ್ನಾಟಕವನ್ನು ಒಂದೇ ಆಡಳಿತದ ಅಡಿಯಲ್ಲಿ ತಂದ ಮೊದಲ ಕನ್ನಡ ರಾಜಮನೆತನ ಬಾದಾಮಿ ಚಾಲುಕ್ಯ ವಂಶ. ಬಾದಾಮಿ ಚಾಲುಕ್ಯರ ಸ್ಥಾಪಕ ಜಯಸಿಂಹ. ಕದಂಬರಲ್ಲಿ ಸೇನಾಧಿಪತಿಯಾಗಿದ್ದ ಇವನು ಕದಂಬರ ಅವನತಿಯ ನಂತರ ಸ್ವತಂತ್ರನಾದನು. ಇವನು ಸಾ.ಶ 500-520 ರ ವರೆಗೆ ಆಡಳಿತ ನಡೆಸಿದನು. ಇಮ್ಮಡಿ ಪುಲಿಕೇಶಿಯ ಐಹೊಳೆ ಶಾಸನ ಮತ್ತು ಮಂಗಳೇಶನ ಮಹಾಕೂಟ ಸ್ಥಂಭ ಶಾಸನಗಳಲ್ಲಿ ಜಯಸಿಂಹನನ್ನು ವಲ್ಲಭೇಂದ್ರ ಎಂದು ವರ್ಣಿಸಲಾಗಿದೆ. ಚಾಲುಕ್ಯರ ರಾಜಚಿಹ್ನೆ ವರಾಹವಾಗಿತ್ತು.
ಒಂದನೆಯ ಪುಲಕೇಶಿ (ಸು. 547-567)
ಮಂಗಳೇಶನ ಮಹಾಕೂಟ ಸ್ಥಂಭಶಾಸನಗಳಲ್ಲಿ ಒಂದನೇ ಪುಲಿಕೇಶಿಯನ್ನು ಪ್ರಿಯತನುಜನೆಂದು, ಐಹೊಳೆ ಶಾಸನದಲ್ಲಿ ಶ್ರೀವಲ್ಲಭನೆಂದು ವರ್ಣಿಸಲಾಗಿದೆ. ಈತನು ಬಾದಾಮಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದನು.
ಒಂದನೇ ಕೀರ್ತಿವರ್ಮ (567-598)
ಕೊಡಚಿಯ ತಾಮ್ರಶಾಸನಗಳಲ್ಲಿ ಈತನನ್ನು ಕತ್ತಿಯರಸನೆಂದು ಉಲ್ಲೇಖಿಸಲಾಗಿದೆ ಮತ್ತು ಐಹೊಳೆ ಶಾಸನದಲ್ಲಿ ನಳರ, ಮೌರ್ಯರ, ಕದಂಬರ ಕಾಳರಾತ್ರಿ ಎಂದು ಬಣ್ಣಿಸಲಾಗಿದೆ. ಹಾಗೂ ಮಹಾಕೂಟ ಸ್ಥಂಭ ಶಾಸನವು ಇವನ ಜೀವನ ಮತ್ತು ಸಾಧನೆಗಳನ್ನು ವಿವರಿಸುತ್ತದೆ. ಈತನನ್ನು ಪ್ರಥಮ ವಾತಾಪಿ ನಿರ್ಮಾಪಕನೆಂದು ಕರೆಯಲಾಗಿದೆ.
ಮಂಗಳೇಶ (598-610)
ಕಲಚೂರ್ಯರ ಮೇಲಿನ ವಿಜಯದ ನೆನಪಿಗೆ ಬಾದಾಮಿಯ ಮಹಾಕೂಟ ದೇವಾಲಯದಲ್ಲಿ ಶಾಸನವನ್ನು ಬರೆಸಿದನು. ಬಾದಾಮಿ ಬೆಟ್ಟದಲ್ಲಿ ವೈಷ್ಣವ ಗುಹಾಲಯವನ್ನು ನಿರ್ಮಿಸಿದನು. ಇವನನ್ನು ಚಾಲುಕ್ಯ ಶೈಲಿಯ ಪಿತಾಮಹಾನೆಂದು ಕರೆಯಲಾಗಿದೆ. ಇವನಿಗೆ ಪರಮಭಾಗವತ, ಪೃಥ್ವೀವಲ್ಲಭ, ರಣವಿಕ್ರಾಂತನೆಂಬ ಬಿರುದುಗಳಿದ್ದವು.
ಇಮ್ಮಡಿ ಪುಲಿಕೇಶಿ (610-642)
ಬಾದಾಮಿ ಚಾಲುಕ್ಯರ ಪ್ರಸಿದ್ಧ ಅರಸ. ತನ್ನ ಚಿಕ್ಕಪ್ಪನಾದ ಮಂಗಳೇಶನನ್ನು ಕೊಂದು ಅಧಿಕಾರಕ್ಕೆ ಬಂದನು.
ರವಿಕೀರ್ತಿಯಿಂದ ಕೆತ್ತಲ್ಪಟ್ಟ ಐಹೊಳೆಯ ಮೆಗುತಿ ಜಿನಾಲಯದ ಶಾಸನವು ಎರಡನೇ ಪುಲಿಕೇಶಿಯ ಜೀವನ ಮತ್ತು ಸಾಧನೆಗಳ ಕುರಿತು ತಿಳಿಸುತ್ತದೆ.
ಪುಲಿಕೇಶಿಯು ಸಾ.ಶ 634 ರಲ್ಲಿ ನಡೆದ ನರ್ಮದಾ ನದಿ ಕಾಳಗದಲ್ಲಿ ಉತ್ತರಾಪಥೇಶ್ವರನಾದ ಹರ್ಷವರ್ಧನನನ್ನು ಸೋಲಿಸಿ ಪರಮೇಶ್ವರ ಹಾಗೂ ದಕ್ಷಿಣಾಪಥೇಶ್ವರನೆಂಬ ಬಿರುದು ಪಡೆದನು. ಪಲ್ಲವ ಅರಸ ಒಂದನೇ ಮಹೇಂದ್ರವರ್ಮನನ್ನು ಸೋಲಿಸಿದನು.
ರಾಷ್ಟ್ರಕೂಟರ ಅಪ್ಪಾಯಕ ಮತ್ತು ಗೋವಿಂದ ಹಾಗೂ ಪುಲಿಕೇಶಿಯರ ನಡುವೆ ಭೀಮಾಯುದ್ಧ ನಡೆಯಿತು.
ಅಜಂತಾ ಗುಹೆಯಲ್ಲಿನ ವರ್ಣಚಿತ್ರವೊಂದರಿಂದ ಪರ್ಷಿಯಾದ ಅರಸ 2ನೇ ಖುಸ್ರು ಪುಲಿಕೇಶಿಯೊಂದಿಗೆ ಅನೇಕ ರಾಜತಾಂತ್ರಿಕ ವ್ಯವಹಾರಗಳನ್ನು ಹೊಂದಿದ್ದನೆಂದು ತಿಳಿದುಬರುತ್ತದೆ.
ಇವನ ಆಸ್ಥಾನಕ್ಕೆ ಚೀನಾದ ಪ್ರಸಿದ್ಧ ಬೌದ್ದಯಾತ್ರಿಕನಾದ ಹ್ಯೂಯೆನ್ ತ್ಸಾಂಗ್ ನು ಭೇಟಿ ನೀಡಿದ್ದನು.
ಪುಲಿಕೇಶಿಯು ಸಾ.ಶ 642 ರ ಪೆರಿಯಾಲ, ಮಣಿಮಂಗಲ ಮತ್ತು ಸುರಮಾರ ಕದನಗಳಲ್ಲಿ ಪಲ್ಲವರ ವಿರುದ್ದ ಸೋತು 1ನೇ ನರಸಿಂಹವರ್ಮನಿಂದ ಹತನಾದನು.
ಪುಲಿಕೇಶಿಯ ತಮ್ಮನಾದ ಕುಬ್ಜ ವಿಷ್ಣುವರ್ಧನನು ವೆಂಗಿ/ಪೂರ್ವ ಚಾಲುಕ್ಯ ಮನೆತನವನ್ನು ಸ್ಥಾಪಿಸಿದನು.
1ನೇ ವಿಕ್ರಮಾದಿತ್ಯ (655-682)
ಪಲ್ಲವರ ವಶವಾಗಿದ್ದ ಬಾದಾಮಿಯನ್ನು ಮತ್ತೇ ವಶಪಡಿಸಿಕೊಂಡನು. ಹೈದರಾಬಾದ್ ಶಾಸನವು 1ನೇ ವಿಕ್ರಮಾದಿತ್ಯನ ಜೀವನ ಮತ್ತು ಸಾಧನೆಗಳನ್ನು ತಿಳಿಸುತ್ತದೆ.
ವಿನಯಾದಿತ್ಯ (682-696)
ವಿನಯಾದಿತ್ಯನಿಗೆ ಯುದ್ಧಮಲ್ಲ ಮತ್ತು ದುರ್ದರ ಮಲ್ಲ ಎಂಬ ಬಿರುದಗಳಿದ್ದವು. ಇವನು ಕಂಬೋಡಿಯಾ ಮತ್ತು ಸಿಂಹಳದ (ಶ್ರೀಲಂಕಾ) ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದನು.
ಸಾ.ಶ 692 ರಲ್ಲಿ ಚೀನಾ ತಾಂಗ್ ಸಾಮ್ರಾಜ್ಯಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ್ದನು.
ವಿಜಯಾದಿತ್ಯ (696-734)
ಪಟ್ಟದಕಲ್ಲಿನ ವಿಜಯೇಶ್ವರ/ಸಂಗಮೇಶ್ವರ ದೇವಾಲಯವನ್ನು ಮತ್ತು ಬದಾಮಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಗಳನ್ನು ನಿರ್ಮಿಸಿದನು.
2ನೇ ವಿಕ್ರಮಾದಿತ್ಯ (734-746)
ಚಾಲುಕ್ಯರ ಕೊನೆಯ ಪ್ರಸಿದ್ಧ ಅರಸನಾಗಿದ್ದಾನೆ. ಇವನ ಕಂಚಿಯ ದಂಡಯಾತ್ರೆಯ ನೆನಪಿಗಾಗಿ ಇವನ ರಾಣಿಯರಾದ ಲೋಕಮಹಾದೇವಿಯು ಲೋಕೆಶ್ವರ ದೇವಾಲಯವನ್ನು (ಪಟ್ಟದಕಲ್ಲಿನ ವಿರೂಪಾಕ್ಷ) ಮತ್ತು ತ್ರೈಲೋಕ್ಯ ಮಹಾದೇವಿಯು ತ್ರೈಲೋಕ್ಯೇಶ್ವರ ದೇವಾಲಯಗಳನ್ನು ಕಟ್ಟಿಸಿದರು. ಇವನು ಕಂಚಿಯ ರಾಜಸಿಂಹ ದೇವಾಲಯದ ಮೇಲೆ ಕನ್ನಡ ಶಾಸನವನ್ನು ಕೆತ್ತಿಸದನು.
ಸಾ.ಶ 739 ರಲ್ಲಿ ಗುಜರಾತಿನ ಮೇಲೆ ದಾಳಿ ಮಾಡಿದ ಅರಬ್ಬರನ್ನು ಹಿಮ್ಮೆಟ್ಟಿಸಿದನು.
2ನೇ ಕೀರ್ತಿವರ್ಮ
ಚಾಲುಕ್ಯರ ಕೊನೆಯ ಅರಸನಾಗಿದ್ದ ಇವನು ದುರ್ಬಲನಾದ ಕಾರಣ ರಾಷ್ಟ್ರಕೂಟರ ದಂತಿದುರ್ಗನು ಕೀರ್ತಿವರ್ಮನನ್ನು ಸೋಲಿಸಿ ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದನು.
ಆಡಳಿತ
ಚಾಲುಕ್ಯರ ಆಡಳಿತದಲ್ಲಿ ಸಪ್ತಾಂಗಗಳಿದ್ದವು. ಅವು ಸ್ವಾಮಿ, ಅಮಾತ್ಯ, ರಾಷ್ಟ್ರ, ದುರ್ಗ, ಕೋಶ, ಬಲ, ಮತ್ತು ಮಿತ್ರ. ಚಾಲುಕ್ಯರ ಸೈನ್ಯವನ್ನು ಕರ್ಣಾಟ ಬಲ ಎಂದು ಕರೆಯುತ್ತಿದ್ದರು. ಮತ್ತು ಸಾಮ್ರಾಜ್ಯವನ್ನು ಸಾಮ್ರಾಜ್ಯ, ಮಹಾರಾಷ್ಟ್ರಕ, ಮಂಡಲ (ರಾಷ್ಟ್ರಕ), ವಿಷಯ ಮತ್ತು ಭೋಗಗಳೆಂದು ವಿಭಾಗಿಸಲಾಗಿತ್ತು.
ಗ್ರಾಮಾಡಳಿತದಲ್ಲಿ ಗ್ರಾಮಸಭೆಯನ್ನು ಮಹಾಜನ ಎಂದು ಕರೆಯಲಾಗುತ್ತಿತ್ತು. ಗ್ರಾಮದ ಮುಖ್ಯಸ್ಥನನ್ನು ಗಾವುಂಡ ಎನ್ನುತ್ತಿದ್ದರು. ಬನ್ನಿಯೂರು ಶಾಸನವು ಚಾಲುಕ್ಯರ ಗ್ರಾಮಾಡಳಿತದ ಕುರಿತು ಮಾಹಿತಿಯನ್ನು ನೀಡುತ್ತದೆ. ಪಟ್ಟಣಗಳ ಆಡಳಿತವನ್ನು ಪಟ್ಟಣಶೆಟ್ಟಿ ನೋಡಿಕೊಳ್ಳುತ್ತಿದ್ದನು.
ಧರ್ಮ
ಚಾಲುಕ್ಯರು ವೈದಿಕ ಧರ್ಮದ ಅನುಯಾಯಿಗಳಾಗಿದ್ದರು. ವೈಷ್ಣವ ಶೈವ ಮತ್ತು ಜೈನ ಮತಗಳು ಸಮಾನ ಸ್ಥಾನಮಾನಗಳನ್ನು ಹೊಂದಿದ್ದವು. ಬಾದಾಮಿ ಐಹೊಳೆ ಮತ್ತು ಲಕ್ಷ್ಮೇಶ್ವರ ಜೈನ ಧರ್ಮದ ಪ್ರಮುಖ ಕೇಂದ್ರಗಳಾಗಿದ್ದವು.
ವ್ಯಾಪಾರ
ಮಂಗಳೂರು, ಕಲ್ಯಾಣ ಮತ್ತು ಮಲ್ಪೆ ಚಾಲುಕ್ಯರ ಕಾಲದ ಪ್ರಮುಖ ಬಂದರುಗಳಾಗಿದ್ದವು. ಚೀನಾದಿಂದ ರೇಷ್ಮೆ, ಔಷಧ ಪದಾರ್ಥ ಮತ್ತು ಲವಂಗವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಮೆಣಸು, ಗಂಧಗಳನ್ನು ರಫ್ತು ಮಾಡಲಾಗುತ್ತಿತ್ತು.
ಗದ್ಯಾಣ ಮತ್ತು ವರಾಹಗಳು ಚಾಲುಕ್ಯರ ಕಾಲದ ಚಿನ್ನದ ನಾಣ್ಯಗಳಾಗಿದ್ದು, ನಾಣ್ಯಗಳ ಮೇಲೆ ಕನ್ನಡ ಮತ್ತು ದೇವನಾಗರಿ ಲಿಪಿಯಲ್ಲಿ ಬರೆಯುತ್ತಿದ್ದರು. ಇವು 120 ಗ್ರೇನ್ ತೂಕವಿದ್ದವು.
ಮಣ. ಸೇರು, ವೀಶ, ಬಾಂಡ, ಪೇರು ಇವು ಅಳತೆಯ ಮಾಪನಗಳಾಗಿದ್ದವು. ಮತ್ತರ ಮತ್ತು ನಿರ್ವತನ ಎಂಬುವು ಭೂ ಅಳತೆಯ ಮಾಪನಗಳಾಗಿದ್ದವು. ಐಹೊಳೆ ಐನೂರು ಎಂಬುದು ಇವರ ಕಾಲದ ವ್ಯಾಪಾರ ಶ್ರೇಣಿಯಾಗಿತ್ತು.
ರಾಜ್ಯದ ಪ್ರಮುಖ ಆದಾಯವು ಕೃಷಿಯಿಂದ ಬರುತ್ತಿತ್ತು. ಇದನ್ನು ಸಿದ್ದಾಯ ಎನ್ನುತ್ತಿದ್ದರು. ಅಲ್ಲದೇ ಪಣ್ಣಾಯ ಎಂಬ ವೀಳ್ಯದ ಎಲೆಯ ಮೇಲಿನ ಸುಂಕ, ಭಾರದ ವಸ್ತುಗಳ ಮೇಲೆ ವಿಧಿಸುತ್ತಿದ್ದ ಹೆರ್ಜುಂಕ/ಪೆರ್ಜುಂಕ, ವಸ್ತುಗಳ ಮೇಲಿನ ಕಿರುಕುಳ ತೆರಿಗೆ, ವ್ಯಾಪಾರದ ಮೇಲಿನ ಬೀಳ್ಕೊಡೆ, ಮತ್ತು ರಾಜನ ಪರಿವಾರದ ವೆಚ್ಚಕ್ಕಾಗಿ ಹಾಕುತ್ತಿದ್ದ ವಡ್ಡರಾವುಲ ತೆರಿಗೆಗಳು ರಾಜ್ಯದ ಇತರ ಆದಾಯಗಳಾಗಿದ್ದವು.
ಕಲೆ ಮತ್ತು ವಾಸ್ತುಶಿಲ್ಪ
ಚಾಲುಕ್ಯರ ಕಾಲದಲ್ಲಿ ಉತ್ತರ ಭಾರತದ ನಾಗರ ಶೈಲಿ ಮತ್ತು ದಕ್ಷಿಣ ಭಾರತದ ದ್ರಾವಿಡ ಶೈಲಿಗಳು ಬೆರೆತು ವೇಸರಶೈಲಿ ಎಂಬೊಂದು ಹೊಸ ಶೈಲಿ ನಿರ್ಮಾಣವಾಯಿತು.
ಚೌಕಾಕಾರದ ಗರ್ಭಗೃಹ, ಪ್ರದಕ್ಷಿಣಾ ಪಥ, ಸುಖನಾಸಿ, ಸಭಾಮಂಟಪ ಇವು ವೇಸರ ಶೈಲಿಯ ಲಕ್ಷಣಗಳಾಗಿದ್ದವು. ಪರ್ಸಿಬ್ರೌನ್ ಎಂಬ ಕಲಾವಿಮರ್ಶಕ ಐಹೊಳೆಯನ್ನು ಭಾರತೀಯ ವಾಸ್ತುಶಿಲ್ಪದ ತೊಟ್ಟಿಲು ಎಂದಿದ್ದಾನೆ.
ಚಾಲುಕ್ಯರು ರಾಕ್ಷಸರಂತೆ ಕಡಿದು ರತ್ನಾಗಾರದಂತೆ ಮುಗಿಸಿದ್ದಾರೆ ಎಂದು ಡಾ. ಎಂ ಶೇಷಾದ್ರಿಯವರು ಹೇಳಿದ್ದಾರೆ.
ಪ್ರಮುಖ ದೇವಾಲಯಗಳು
ಬಾದಾಮಿ : ತ್ರಿಮೂರ್ತಿ ದೇವಾಲಯ, ಬನಶಂಕರಿ
ಐಹೊಳೆ : ಲಾಡ್‍ಖಾನ್ ದೇವಾಲಯ, ಮೆಗುತಿ ಜಿನಾಲಯ (ಇಮ್ಮಡಿ ಪುಲಿಕೇಶಿಯ ಆಸ್ಥಾನ ಕವಿ ರವಿಕೀರ್ತಿ ಇದನ್ನು ಕಟ್ಟಿಸಿದನು), ದುರ್ಗಾ ದೇವಾಲಯ (ಇದರ ತಳವಿನ್ಯಾಸವು ಕುದುರೆ ಲಾಳಾಕಾರ/ಆನೆಯ ಪೃಷ್ಟಾಕಾರದಲ್ಲಿದೆ), ಮಲ್ಲಿಕಾರ್ಜುನ ದೇವಾಲಯ, ಸಿದ್ದೇಶ್ವರ ದೇವಾಲಯ
ಪಟ್ಟದಕಲ್ಲು (ಕಿಸುವೊಳಲು) : ವಿರೂಪಾಕ್ಷ (ವಿಜಯೇಶ್ವರ) ದೇವಾಲಯ (2ನೇ ವಿಕ್ರಮಾದಿತ್ಯನ ಪತ್ನಿ ಲೋಕಮಹಾದೇವಿಯು ಇದನ್ನು ಕಟ್ಟಿಸಿದಳು. ಗುಂಡ ಎಂಬುವವನು ಇದರ ಶಿಲ್ಪಿ. ಪರ್ಸಿಬ್ರೌನ್‍ರು ವಿರೂಪಾಕ್ಷ ದೇವಾಲಯವನ್ನು ದ್ರಾವಿಡ ಶೈಲಿಯ ಅತ್ಯುತ್ತಮ ಕೃತಿ ಎಂದಿದ್ದಾರೆ.), ಸಂಗಮೇಶ್ವರ , ಗಳಗನಾಥ, ಪಾಪನಾಥೇಶ್ವರ, ಮಲ್ಲಿಕಾರ್ಜುನ (ತ್ರೈಲೋಕ್ಯೇಶ್ವರ), ಕಾಶಿ ವಿಶ್ವೇಶ್ವರ
ಗುಹಾಲಯಗಳು
ಅಜಂತಾ ಗುಹೆಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ. ಬಾದಾಮಿಯಲ್ಲಿನ 4 ಗುಹಾಲಯಗಳಲ್ಲಿ 1ನೇ ಗುಹೆಯು ಶೈವ ಧರ್ಮ, 2 ಮತ್ತು 3ನೇ ಗುಹೆಗಳು ವೈಷ್ಣವ ಧರ್ಮ ಹಾಗೂ 4ನೇ ಗುಹೆಯು ಜೈನ ಧರ್ಮಕ್ಕೆ ಸಂಬಂಧಿಸಿದುದಾಗಿದೆ.
ಐಹೊಳೆಯಲ್ಲಿನ 3 ಗುಹಾಲಯಗಳಲ್ಲಿ 1ನೆಯದು ಜೈನ, 2ನೆಯದು ವೈಷ್ಣವ ಹಾಗೂ 3ನೆಯದು ಬೌದ್ದ ಧರ್ಮ ಸಂಬಂಧಿಸಿದುದಾಗಿದೆ.
ಚಿತ್ರಕಲೆ
ರೇವಡಿ ಓವಜ್ಜ, ಅನಿವಾರಿತ ಗುಂಡ, ನರಸೊಬ್ಬ ಮುಂತಾದವರು ಈ ಕಾಲದ ಪ್ರಮುಖ ಶಿಲ್ಪಿಗಳಾಗಿದ್ದರು
ಸಾಹಿತ್ಯ ಮತ್ತು ಲಿಲತ ಕಲೆ
ವಿಜ್ಜಿಕಾ/ವಿಜಯ ಮಹಾದೇವಿ ಎಂಬಾಕೆ ಚಾಲುಕ್ಯರ ಕಾಲದ ಶ್ರೇಷ್ಟ ಸಂಸ್ಕøತ ಕವಯಿತ್ರಿಯಾಗಿದ್ದಳು. ಇವಳಿಗೆ ಕರ್ನಾಟಕ ಸರಸ್ವತಿ ಎಂಬ ಬಿರುದಿತ್ತು. ಈಕೆಯ ಪ್ರಸಿದ್ಧ ಕೃತಿ ಕೌಮುದಿ ಮಹೋತ್ಸವ. ಶಿವ ಭಟ್ಟಾರಕ ಎಂಬಾತನು ಹರ ಪಾರ್ವತೀಯ ಕೃತಿಯನ್ನು ರಚಿಸಿದನು.
ಲಚ್ಚ ಮಹಾದೇವಿ ಎಂಬಾಕೆ ಇವರ ಕಾಲದಲ್ಲಿ ನೃತ್ಯ ವಿದ್ಯಾಧರಿ ಎಂದು ಬಿರುದು ಹೊಂದಿದ್ದ ಶ್ರೇಷ್ಟ ನರ್ತಕಿಯಾಗಿದ್ದಳು. ಇನ್ನೊಬ್ಬ ಆಸ್ಥಾನ ನರ್ತಕಿ ವೀಣಾಪೋಟಿಗಳ್ ಮಹಾಕೂಟೇಶ್ವರ ದೇವಾಸ್ಥಾನಕ್ಕೆ ದಾನ ನೀಡಿದ್ದಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ